ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ವನ್ಯಜೀವಿ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅತಿಕ್ರಮಣ ಮಾಡಿದ್ದ ಅರಸಿನಮಕ್ಕಿ ಎಂಬಲ್ಲಿನ ನಿವಾಸಿ ಪಿ.ಟಿ ಜೋಸೆಫ್ ಎಂಬವರನ್ನು ಅ 31ರಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಸಂಪೂರ್ಣ ವಾಗಿ ನಾಶ ಪಡಿಸಿ ಇಲ್ಲಿ ಅರಣ್ಯ ಗಿಡಗಳನ್ನು ನೆಟ್ಟಿದ್ದಾರೆ.
ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕು ಪತ್ರವನ್ನು ಅತಿಕ್ರಮಣ ಮಾಡಿರುವುದಾಗಿ ರದ್ದುಪಡಿಸಿದ ವನ್ಯಜೀವಿ ಇಲಾಖೆ ಇದೀಗ ಅತಿಕ್ರಮಣ ಮಾಡಿ ಕಟ್ಟಿದ್ದ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ಕಳುಹಿಸಿದ್ದು ಬೇರೆ ಜಮೀನಾಗಲಿ ಮನೆಯಾಗಲಿ ಇಲ್ಲದ ಈ ಕುಟುಂಬ ಅಕ್ಷರಶ ಬೀದಿಪಾಲಾದಂತಾಗಿದೆ.ಇವರು ಕಳೆದ 50 ವರ್ಷಗಳಿಂದ ಬದುಕಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕ್ರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದ್ದು ವನ್ಯಜೀವಿ ಇಲಾಖೆಯ ಬೋರ್ಡ್ ಅಳವಡಿಸಲಾಗಿದೆ.
1970 ರ ಸುಮಾರಿಗೆ ಪಿಟಿ ಜೋಸೆಫ್ ಅವರ ತಂದೆ ಇಲ್ಲಿ ಬಂದು ನೆಲೆಸಿದ್ದು 1997ರಲ್ಲಿ ಇವರಿಗೆ ರಾಜ್ಯ ಸರಕಾರ ಅಕ್ರಮ ಸಕ್ರಮ ಕಾನೂನಿನ ಅಡಿಯಲ್ಲಿ 4.90 ಎಕ್ರೆ ಜಮೀನಿಗೆ ಹಕ್ಕು ಪತ್ರವನ್ನೂ ನೀಡಿತ್ತು. ಯಾವಾಗ ಕುದಯರೇ ಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಯಿತೋ ಅದರೊಂದಿಗೆ ಈ ಕುಟುಂಬಕ್ಕೆ ಸಂಕಷ್ಟಗಳೂ ಆರಂಭವಾಯಿತು. 2004 ರಲ್ಲಿ ಇವರ ಹಕ್ಕು ಪತ್ರವನ್ನು ರದ್ದು ಪಡಿಸಲಾಯಿತು. ಈ ವೇಳೆಗೆ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಭಾಗಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗಿದ್ದು ಸರಕಾರ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂಬ ಭರವಸೆಯನ್ನು ನೀಡಿತ್ತು. ಆದರೆ 2014 ರಲ್ಲಿ ಅರಣ್ಯ ಇಲಾಖೆ ಜೋಸೆಫ್ ಅವರಿಗೆ ಮತ್ತೆ ನೋಟೀಸ್ ನೀಡಿ ಒಕ್ಕಲೇಳುವಂತೆ ಸೂಚಿಸಿತ್ತು. ಇದರ ವಿರುದ್ದ ಅವರು ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ತಿರಸ್ಕಾರಗೊಂಡಿತ್ತು. ಇವರಿಗೆ ಒಕ್ಕಲೇಳುವಂತೆ ಅ 11ರಂದು ಅಂತಿಮ ನೋಟೀಸ್ ನೀಡಿ ಅ 30 ರೊಳಗೆ ಸ್ಥಳ ಬಿಟ್ಟು ತೆರಳುವಂತೆ ಸೂಚಿಸಿತ್ತು. ಇದೀಗ ಅ 31ರಂದು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದಿಗೆ ಆಗಮಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠ ನೇತೃತ್ವದ ತಂಡ ಅತಿಕ್ರಮಣ ಮಾಡಿದ್ದ ಕೃಷಿಯನ್ನು ಹಾಗೂ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಇನ್ನೂ ಹಲವು ಕುಟುಂಬಗಳಿಗೆ ನೋಟೀಸ್: ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿರುವ ಹಲವು ಕುಟುಂಬಗಳಿಗೆ ಈಗಾಗಲೇ ಜಮೀನು ಅತಿಕ್ರಮಣದ ಬಗ್ಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಟೀಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ. ಕುದುರೇಮುಖ ರಾಷ್ಟ್ರೀಯ ಉಧ್ಯಾನವನದೊಳಗೆ ವಾಸಿಸುತ್ತಿರುವ ಹಲವು ಕುಟುಂಬಗಳಿಗೆ ಸಮರ್ಕಕ ದಾಖಲೆಗಳಿಲ್ಲ ಅಂತಹ ಕುಟುಂಬಗಳಿಗೆ ನೋಟೀಸ್ ನೀಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ ಮುಂದಿನ ಹಂತವಾಗಿ ಇನ್ನಷ್ಟು ಒಕ್ಕಲೆಬ್ಬಿಸುವ ಪ್ರಕ್ರಿಯೆಗಳಿಗೆ ಅರಣ್ಯ ಇಲಾಖೆ ಮುಂದಾಗುವ ಸಾಧ್ಯತೆಯಿದೆ. ಹೈಕೋರ್ಟ್ ಗೆ ಹೋಗದೆ ಸುಮ್ಮನಿದ್ದ ಕುಟುಂಬ: ವನ್ಯಜೀವಿ ವಿಭಾಗದ ವಿರುದ್ಧ ಜೋಸೆಫ್ ಕುಟುಂಬಕ್ಕೆ ಹೈಕೋರ್ಟ್ ಗೆ ಹೋಗಲು ಅವಕಾಶವಿದ್ದರು ಕೂಡ ಹೈಕೋರ್ಟ್ ಮೇಲ್ಮನವಿಯನ್ನು ಸಲ್ಲಿಸಲು ಹೋಗದೆ ಸುಮ್ಮನಿದ್ದರು ಎನ್ನಲಾಗಿದೆ.


