Tuesday, May 21, 2024
Homeಪ್ರಮುಖ-ಸುದ್ದಿಅಲ್ಲಿ ಕೋವಿಡ್ನಿಂದ ಗುಣಮುಖರಾದವರೂ ಇದ್ದಕ್ಕಿದ್ದಂತೆ ಸಾಯುತ್ತಿರುವುದು ಏಕೆ?

ಅಲ್ಲಿ ಕೋವಿಡ್ನಿಂದ ಗುಣಮುಖರಾದವರೂ ಇದ್ದಕ್ಕಿದ್ದಂತೆ ಸಾಯುತ್ತಿರುವುದು ಏಕೆ?

spot_img
- Advertisement -
- Advertisement -

ಸೂರತ್​: ಗುಜರಾತ್​ನಾದ್ಯಂತ ಕೋವಿಡ್​ನಿಂದ ಗುಣಮುಖರಾಗಿ ಮನೆ ಸೇರಿದ ಕೆಲವೇ ಗಂಟೆಗಳಲ್ಲಿ ಜನರು ಹಠಾತ್ತನೆ ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ಏನೆಂಬುದು ತಿಳಿಯದೆ ವೈದ್ಯರು ಕಂಗಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂರತ್​ ಮಹಾನಗರ ಪಾಲಿಕೆಯ ಎಸ್​ಎಂಐಎಂಇಆರ್​ ಆಸ್ಪತ್ರೆಯಲ್ಲಿ ಕೋವಿಡ್​-19 ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಪುಣ ಬಡಾವಣೆ ನಿವಾಸಿ ಹೆಮೆಬೆನ್​ ಚೊವಾಟಿಯಾ (70) ಜುಲೈ 17ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮನೆಗೆ ಮರಳಿದ್ದ ಅವರು ಕೆಲಗಂಟೆಗಳವರೆಗೆ ಮನೆಯವರ ಜತೆ ಚೆನ್ನಾಗಿ ಮಾತನಾಡಿದ್ದರು. ಆದರೆ ಹಠಾತ್ತನೆ ಕುಸಿದು ಬಿದ್ದ ಅವರು ಇಹಲೋಕವನ್ನೇ ತ್ಯಜಿಸಿದ್ದರು.

ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದರೂ ಹೆಮೆಬೆನ್​ ಕೋವಿಡ್​ನಿಂದ ಬೇಗನೆ ಗುಣಮುಖರಾಗಿದ್ದರು. ಆದರೂ ಅವರು ಹಠಾತ್ತನೆ ಸಾಯಲು ಕಾರಣ ಏನೆಂಬುದು ಗೊತ್ತಾಗಿಲ್ಲ.

ಎರಡು ತಿಂಗಳ ಹಿಂದೆ ಅಹಮದಾಬಾದ್​ನ ಛಗನ್​ ಮಕ್ವಾನಾ (67) ಬಸ್​ ನಿಲ್ದಾಣದಲ್ಲಿ ಕುಳಿತಲ್ಲೇ ಮೃತಪಟ್ಟಿದ್ದರು. ಇವರು ಕೂಡ ಕೋವಿಡ್​ನಿಂದ ಗುಣಮುಖರಾಗಿ ಸಿವಿಲ್​ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಗರ ಸಾರಿಗೆ ಬಸ್​ನಲ್ಲಿ ಮನೆಗೆ ಮರಳುತ್ತಿದ್ದರು. ದಣಿವಾಯಿತು ಎಂದು ಬಸ್​ನಿಲ್ದಾಣದಲ್ಲಿ ಕುಳಿತವರು ಅಲ್ಲಿಯೇ ಮೃತಪಟ್ಟಿದ್ದರು. ಇದರಿಂದಾಗಿ ಬಸ್​ನಿಲ್ದಾಣದಲ್ಲಿ ಭಾರಿ ಗದ್ದಲ ಉಂಟಾಗಿತ್ತು. ಪೊಲೀಸರ ತನಿಖೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಸೂರತ್​ ಮೂಲದ ವೈದ್ಯ ಡಾ. ದಿಲೀಪ್​ ಮೋದಿ ಅವರ ಸಾವು ಇನ್ನೂ ನಿಗೂಢ. ಕರೊನಾವೈರಾಣು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಇವರ ಎಕ್ಸ್​ರೇ ಮತ್ತಿತರ ವರದಿಗಳು ತೃಪ್ತಿಕರವಾಗಿದ್ದು, ಗುಣಮುಖರಾಗುವ ಹಾದಿಯಲ್ಲಿದ್ದಾರೆ ಎಂದು ವೈದ್ಯರು ಮನೆಯವರಿಗೆ ತಿಳಿಸಿದ್ದರು. ಆದರೆ, ಅದೇ ದಿನ ಸಂಜೆ ವೇಳೆಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.

ಇಂಥ ಸಾವುಗಳು ಗುಜರಾತ್​ನಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಾರಣ ಏನೆಂಬುದನ್ನು ಅರಿಯಲು ವೈದ್ಯರು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಕರೊನಾ ವೈರಾಣು ಮನುಷ್ಯನ ದೇಹದ ಮೇಲೆ ಉಂಟು ಮಾಡುವ ದೀರ್ಘ ಪರಿಣಾಮಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಅಧಿಕ ಉರಿಯೂತ ಮತ್ತು ರಕ್ತದ ಗಂಟುಗಳು ಹೆಚ್ಚಾಗುವಿಕೆ (ಹೈಪರ್​ಕ್ಲಾಟಿಂಗ್​) ಸಮಸ್ಯೆಯಿಂದಾಗಿ ಸಾಯುತ್ತಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಇದೀಗ ಗುಣಮುಖರಾದವರಲ್ಲೂ ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವು ಸಂಭವಿಸುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಣಮುಖರಾದ ಹಲವು ವಾರಗಳವರೆಗೂ ಈ ಸಮಸ್ಯೆ ವಿಸ್ತರಣೆಗೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಕರೊನಾವೈರಾಣು ಸೋಂಕಿನಿಂದ ಗುಣಮುಖರಾದ ಬಳಿಕವೂ ಒಂದು ವೈರಾಣುಗಳು ಉಳಿದುಕೊಂಡಿರುತ್ತವೆ. ಈ ವೈರಾಣುಗಳು ರಕ್ತ ಹೆಪ್ಪುಗಟ್ಟಲು ಕಾರಣವಾಗಿ, ಮಿದುಳಿನ ಆಘಾತ, ಹೃದಯಾಘಾತ ಇಲ್ಲವೇ ಪಲ್ಮನರಿ ಎಂಬೋಲಿಸಂಗೆ ಕಾರಣವಾಗುವುದರಿಂದ ಗುಣಮುಖರಾದವರು ಕೂಡ ಸಾಯುತ್ತಿದ್ದಾರೆ ಎಂದು ಗುಜರಾತ್​ನ ಕೋವಿಡ್​ ಕಾರ್ಯಪಡೆಯ ಸದಸ್ಯ ಹಾಗೂ ಶ್ವಾಸಕೋಶ ತಜ್ಞ ಡಾ. ತುಷಾರ್​ ಪಟೇಲ್ ಹೇಳಿದ್ದಾರೆ.

ಕೋವಿಡ್​-19ರಿಂದ ಗುಣಮುಖರಾಗಿದ್ದ ವೀನುಭಾಯ್​ ಪರ್ಮಾರ್​ ಎಂಬುವರು ಮಿದುಳಿನ ಆಘಾತಕ್ಕೆ ಒಳಗಾಗಿದ್ದರು. ಒಂದೆರಡು ದಿನಗಳಿಂದ ತೀವ್ರ ಮೌನಕ್ಕೆ ಶರಣಾಗಿದ್ದು ಗಮನಕ್ಕೆ ಬಂದಿತು. ಅದೃಷ್ಟವಶಾತ್​ ಈ ಸಂಗತಿಯನ್ನು ಡಾ. ಸುಧೇಂಧು ಪಟೇಲ್ ಎಂಬ ಹಿರಿಯ ವೈದ್ಯರೇ ಗಮನಿಸಿದ್ದರು. ಹಾಗಾಗಿ ಇವರನ್ನು ತಪಾಸಣೆ ಮಾಡಿದಾಗ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿತು. ತಕ್ಷಣವೇ ಬ್ಲಡ್​ ಥಿನ್ನರ್ಸ್​ ಔಷಧವನ್ನು ಕೊಟ್ಟ ನಂತರದಲ್ಲಿ ಅವರು ಸಂಪೂರ್ಣ ಚೇತರಿಸಿಕೊಂಡರು ಎಂದು ಹೇಳಲಾಗಿದೆ.

ಎಲ್ಲರೂ ಇವರಂತೆ ಅದೃಷ್ಟವಂತರು ಇರುವುದಿಲ್ಲ. ಅಲ್ಲದೆ ಈ ಕರೊನಾ ವೈರಾಣು ಹೊಸದಾಗಿರುವುದರಿಂದ, ಇದು ದೀರ್ಘಾವಧಿಯಲ್ಲಿ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ಯಾರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸುತ್ತದೋ ಅವರಿಗೆ ರಕ್ತ ತಿಳಿಗೊಳಿಸುವ ಔಷಧಗಳನ್ನು ಕೊಡುವಂತೆ ಮತ್ತು ನಿಯಮಿತವಾಗಿ ಡಿ-ಡಿಮ್ಮರ್​ ಪರೀಕ್ಷಿಸುವಂತೆ ಎಲ್ಲ ವೈದ್ಯರಿಗೂ ಸೂಚಿಸಲಾಗಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಅತುಲ್​ ಪಟೇಲ್​ ಹೇಳಿದ್ದಾರೆ.

- Advertisement -
spot_img

Latest News

error: Content is protected !!