ಬಂಟ್ವಾಳ; ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಕಂಪನಿಯವರ ನಿರ್ಲಕ್ಷ್ಯದಿಂದಾಗಿ ಅಡಿಕೆ ಕೃಷಿ ನಾಶವಾಗುವ ಆತಂಕದಲ್ಲಿ ಮಹಿಳೆಯೊಬ್ಬರು ಕಂಪನಿಗೆ ಅಡಿಕೆ ತೋಟ ಉಳಿಸಿಕೊಡುವಂತೆ ಮನವಿ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ದೊರ್ಮೆ ಎಂಬಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ದೊರ್ಮೆ ನಿವಾಸಿ ಚಂದ್ರಾವತಿ ಅವರ ಅಡಿಕೆ ತೋಟದಲ್ಲಿ ಕೆಸರು ನೀರು ನಿಂತಿದ್ದು, ಲಕ್ಷಾಂತರ ರೂ ಫಸಲು ನೀಡುವ ಅಡಿಕೆ ಗಿಡಗಳು ನಾಶವಾಗುವ ಲಕ್ಷಣಗಳು ಕಾಣಿಸ್ತಿದೆ.ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚರಂಡಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಅಡಿಕೆ ತೋಟದಲ್ಲಿ ತುಂಬಿಕೊಂಡಿದೆ.ಇದರಿಂದ ಅಡಿಕೆ ಗಿಡ ಕೊಳೆಯುವ ಆತಂಕ ಶುರುವಾಗಿದೆ.

ಇನ್ನು ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ನೀರು ಇವರ ಜಮೀನಿಗೆ ಬರದಂತೆ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ.ಇದೇ ರೀತಿ ಕಳೆದ ವರ್ಷ ನೀರು ತುಂಬಿ ಲಕ್ಷಾಂತರ ಮೌಲ್ಯದ ಅಡಿಕೆ ಗಿಡಗಳು ಸತ್ತುಹೋಗಿವೆ. ಈ ಬಗ್ಗೆ ಅನೇಕ ಬಾರಿ ಕಂಪನಿಯ ಬಳಿಗೆ ಹೋಗಿ ದೂರು ನೀಡಿದೆಯಾದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದೀಗ ಈ ವರ್ಷ ಉಳಿದ ಅಡಿಕೆ ಕೃಷಿಗೂ ನೀರು ತುಂಬಿದ್ದು, ಗಿಡಗಳು ನಾಶವಾಗುವ ಭೀತಿ ಎದುರಾಗಿದೆ.ಇದೀಗ ಕಂಪನಿಗೆ ಸಮಸ್ಯೆ ಪರಿಹರಿಸಲು ಅವರು ಮನವಿ ಮಾಡಿದ್ದಾರೆ.