Sunday, August 9, 2026
HomeUncategorizedವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ; ಗೃಹಿಣಿಯ ಸಮಯಪ್ರಜ್ಞೆಯಿಂದ ಪಾರಾದ ಮೂವರು

ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ; ಗೃಹಿಣಿಯ ಸಮಯಪ್ರಜ್ಞೆಯಿಂದ ಪಾರಾದ ಮೂವರು

- Advertisement -
- Advertisement -

ವಿಟ್ಲ: ಸಿಲಿಂಡರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಭೀಕರವಾಗಿ ಸ್ಫೋಟಗೊಂಡು ಮನೆಯೊಂದು ಸಂಪೂರ್ಣವಾಗಿ ಹಾನಿಗೊಳಗಾದ ಘಟನೆ ವಿಟ್ಲ ಕಸಬಾ ಗ್ರಾಮದ ಕುರುಂಬಳದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಗೃಹಿಣಿಯ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಮಗು ಹಾಗೂ ವೃದ್ಧೆ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಕುರುಂಬಳ ನಿವಾಸಿ ಕೆ. ಹಮೀದ್ ಅವರಿಗೆ ಸೇರಿದ ಮನೆಯಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಈ ಅನಾಹುತ ನಡೆದಿದೆ. ಹಮೀದ್ ಅವರು ಪೇಟೆಗೆ ತೆರಳಿದ್ದಾಗ, ಪತ್ನಿ ಖೈರುನ್ನಿಸಾ ಅಡುಗೆ ಕೋಣೆಯಲ್ಲಿ ಕಾರ್ಯನಿರತರಾಗಿದ್ದರು. ಈ ವೇಳೆ ಗ್ಯಾಸ್‌ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಏಕಾಏಕಿ ಬೆಂಕಿ ಆವರಿಸಿದೆ. ಅಪಾಯವನ್ನು ತಕ್ಷಣವೇ ಗ್ರಹಿಸಿದ ಖೈರುನ್ನಿಸಾ ಅವರು ಧೈರ್ಯಗೆಡದೆ, ಮನೆಯಲ್ಲಿದ್ದ ತಮ್ಮ 9 ವರ್ಷದ ಪುತ್ರ ಇಮ್ರಾನ್ ಹಾಗೂ ದೃಷ್ಟಿಹೀನರಾಗಿ ಹಾಸಿಗೆ ಹಿಡಿದಿದ್ದ 80 ವರ್ಷದ ಅತ್ತೆ ಮರಿಯಮ್ಮ ಅವರನ್ನು ತಕ್ಷಣವೇ ಹೊರ ಕರೆತಂದಿದ್ದಾರೆ. ಇವರ ಬೊಬ್ಬೆ ಕೇಳಿ ಧಾವಿಸಿ ಬಂದ ನೆರೆಯ ನಿವಾಸಿ ಉಮ್ಮರ್, ಮೂವರನ್ನೂ ಸುರಕ್ಷಿತವಾಗಿ ಅಂಗಳಕ್ಕೆ ಕರೆದೊಯ್ಯಲು ನೆರವಾಗಿದ್ದಾರೆ.

ಅವರೆಲ್ಲರೂ ಅಂಗಳ ತಲುಪಿದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಬಹುತೇಕ ಭಾಗ ಸಂಪೂರ್ಣವಾಗಿ ಧರೆಗುರುಳಿದೆ. ಗೃಹಿಣಿಯ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!