ಸುಳ್ಯ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಡೀಪ್‌ಫೇಕ್, ಮಾರ್ಪಡಿಸಿದ ವೀಡಿಯೊಗಳು ಹಾಗೂ ಧ್ವನಿ ದಾಖಲೆಗಳ ಹಾವಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುಳ್ಯದ ಇಂಜಿನಿಯರ್ ಜೀವನ್ ಪಿ. ರೈ ಅವರು ಡಿಜಿಟಲ್ ವಿಷಯಗಳ ನೈಜತೆಯನ್ನು ಪರಿಶೀಲಿಸುವ ಅತ್ಯಾಧುನಿಕ ‘ವಾಸ್ತವಿಕ್’ ಆ್ಯಪ್ ಅನ್ನು ಪರಿಚಯಿಸಿದ್ದಾರೆ.
25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ತಂತ್ರಜ್ಞ ಹಾಗೂ ಉದ್ಯಮಿ ಗಜೇಂದ್ರ ಸಿಂಗ್ ಅವರು ಬಿಡುಗಡೆ ಮಾಡಿರುವ ಈ ಮೀಡಿಯಾ ಅಥೆಂಟಿಸಿಟಿ ವ್ಯಾಲಿಡೇಶನ್ ವೇದಿಕೆಯ ಅಭಿವೃದ್ಧಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸೋಣಂಗೇರಿ ನಿವಾಸಿ ಜೀವನ್ ಪಿ. ರೈ ಅವರು ಲೀಡ್ ಆರ್ಕಿಟೆಕ್ಟ್ (Lead Architect) ಆಗಿ ಕಾರ್ಯನಿರ್ವಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಯುಕೆ ಮೂಲದ ‘ಅಡೋಎಕ್ಸ್ ಲಿಮಿಟೆಡ್’ ಸಂಸ್ಥೆಯ ಉದ್ಯೋಗಿಯಾಗಿರುವ ಜೀವನ್ ಅವರು ಸೋಣಂಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ರೈ ಮತ್ತು ಜಯಲಕ್ಷ್ಮಿ ದಂಪತಿಗಳ ಪುತ್ರನಾಗಿದ್ದು, ಪ್ರಸ್ತುತ ತಮ್ಮ ಊರಿನಿಂದಲೇ ‘ವರ್ಕ್ ಫ್ರಮ್ ಹೋಮ್’ ಮೂಲಕ ಈ ತಂತ್ರಜ್ಞಾನದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.
ಇನ್ನು ಈ ‘ವಾಸ್ತವಿಕ್’ ಆ್ಯಪ್ ಡಿಜಿಟಲ್ ವಿಷಯಗಳು ತಿರುಚುವಿಕೆ, ತಪ್ಪು ಮಾಹಿತಿ ಅಥವಾ ವ್ಯಕ್ತಿತ್ವ ನಕಲಿಗೆ ಒಳಗಾಗದಂತೆ ರಕ್ಷಣೆ ನೀಡಲಿದ್ದು, ಪತ್ರಕರ್ತರು, ರಾಜಕಾರಣಿಗಳು, ಕಂಟೆಂಟ್ ಕ್ರಿಯೇಟರ್‌ಗಳು, ಕಾರ್ಪೊರೇಟ್ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್‌ಗಳಲ್ಲಿ ಈ ಆ್ಯಪ್ ಲಭ್ಯವಿದ್ದು, ಹೊಸದಾಗಿ ನೋಂದಾಯಿಸಿಕೊಳ್ಳುವ ಬಳಕೆದಾರರಿಗೆ 5 ಜಿಬಿ ಉಚಿತ ಸ್ಟೋರೇಜ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


