Monday, July 13, 2026
Homeಕರಾವಳಿಮಂಗಳೂರುಮಂಗಳೂರು: 14  ಬಾರಿ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್...

ಮಂಗಳೂರು: 14  ಬಾರಿ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: 14  ಬಾರಿ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರಿನ ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಂತೆ ಮೈದಾನ ಬೋವಿ ಕಾಲನಿ ನಿವಾಸಿ ಚಂದ್ರ ಶೇಖರ್ ಲಿಂಗರಾಜ್ ಬೋವಿ (26) ಬಂಧಿತ ಆರೋಪಿ

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ 2024 ರಲ್ಲಿ ಗಂಭೀರ ಪ್ರಕರಣವೊಂದು ದಾಖಲಾಗಿತ್ತು. ಈ ಕೇಸ್‌ನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಆರೋಪಿ ಚಂದ್ರಶೇಖರ್, ತದನಂತರ ಕೋರ್ಟ್ ಕಲಾಪಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.  ಆರೋಪಿ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈತನನ್ನು ದಸ್ತಗಿರಿ ಮಾಡುವಂತೆ ಸತತ 14 ಬಾರಿ ವಾರೆಂಟ್ ಹೊರಡಿಸಿತ್ತು. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ಚಂದ್ರಶೇಖರ್ ತನ್ನ ಹಳೆಯ ವಿಳಾಸವನ್ನು ತೊರೆದು ಯಾರಿಗೂ ತಿಳಿಯದಂತೆ ಬೇರೆಡೆ ವಾಸವಿದ್ದನು. ಈತನ ಚಾಣಾಕ್ಷತನದಿಂದಾಗಿ ಪ್ರತಿ ಬಾರಿಯೂ ವಾರೆಂಟ್ ಜಾರಿ ಮಾಡಲಾಗದೆ ಪೊಲೀಸರು ಬರಿಗೈಲಿ ವಾಪಸಾಗುತ್ತಿದ್ದರು.

ಆರೋಪಿಯ ಪತ್ತೆಗಾಗಿ ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ನಿಗಾ ಇಡಲಾಗಿತ್ತು. ಜುಲೈ 11 ರಂದು ಆರೋಪಿಯು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಮಲ್ಲಿಗೇಹಳ್ಳಿ ಮೈದಾಳು ಎಂಬ ಹಳ್ಳಿಯಲ್ಲಿ ಅಡಗ ಕುಳಿತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಠಾಣೆಯ ವಾರೆಂಟ್ ವಿಭಾಗದ ಹೆಡ್ ಕಾನ್ಸ್‌ಟೇಬಲ್ ಬಾಲರಾಜ್ ಮತ್ತು ರವಿಕುಮಾರ್ ಅವರನ್ನೊಳಗೊಂಡ ವಿಶೇಷ ತಂಡವು ಬಾಳೆಹೊನ್ನೂರಿಗೆ ಧಾವಿಸಿ, ಅಡಗುದಾಣದ ಮೇಲೆ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿಕಟ್ಟಿದೆ. ಬಂಧಿತ ಆರೋಪಿಯನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!