ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾರ್ವಜನಿಕರೂ ಕೂಡಾ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯವನ್ನು ಸಿದ್ದಪಡಿಸಲಾಗಿದೆ. ಸಾರ್ವಜನಿಕರು https://kscbcselfdeclaration.karnataka.gov.in/ ನಲ್ಲಿ ಸಮೀಕ್ಷೆಯನ್ನು ಸೆಲ್ಫ್ ಡಿಕ್ಲರೇಷನ್ ಮೂಲಕ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ನಾಗರಿಕ ಎಂಬುದನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್ ಸಂಖ್ಯೆ ನೀಡಿದಲ್ಲಿ, ಮೊಬೈಲ್ ಫೋನ್ ಗೆ ಓಟಿಪಿ ಬರಲಿದ್ದು ಅದನ್ನು ದಾಖಲು ಮಾಡಬೇಕಾಗುತ್ತದೆ.
ನಂತರ ತೆರೆಯುವ ಪುಟದಲ್ಲಿ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲದಿದ್ದರೆ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಿಸುತ್ತದೆ. ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಿ ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕರ್ ನಲ್ಲಿರುವ ಯುಹೆಚ್ ಐಡಿ ಸಂಖ್ಯೆ ದಾಖಲಿಸಿ ಸ್ಕ್ರೀನ್ ನಲ್ಲಿ ಕೋರುವ ಮಾಹಿತಿಗಳನ್ನು ದಾಖಲಿಬೇಕಾಗುತ್ತದೆ.ಕೊನೆಯಲ್ಲಿ ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್ ಫೋನ್ ಗೆ ಸಂದೇಶ ಬರಲಿದೆ.


