
ಉಪ್ಪಿನಂಗಡಿ: ಲಾರಿಯಲ್ಲಿ ಅಮಾನವೀಯವಾಗಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ, ನಿರ್ವಾಹಕ ವಶಕ್ಕೆ ಪಡೆದು 16 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಲಾರಿಯೊಂದರಲ್ಲಿ ಜಾನುವಾರುಗಳನ್ನು ಕಾನೂನುಬಾಹಿರವಾಗಿ ಕೇರಳ ಭಾಗಕ್ಕೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಭಜರಂಗದಳದ ಕಾರ್ಯಕರ್ತರಿಗೆ ಲಭ್ಯವಾಗಿತ್ತು. ಅವರು ತಕ್ಷಣವೇ ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಒಳಗೆ ಅತ್ಯಂತ ಕಿಕ್ಕಿರಿದು, ಅಮಾನುಷವಾಗಿ ತುಂಬಲಾಗಿದ್ದ ಸುಮಾರು 16 ಜಾನುವಾರುಗಳು ಪತ್ತೆಯಾಗಿವೆ. ಪೊಲೀಸರು ತಕ್ಷಣವೇ ಜಾನುವಾರುಗಳನ್ನು ಕೆಳಗಿಳಿಸಿ ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲೇ ಲಾರಿ ಚಾಲಕ ಮತ್ತು ಕ್ಲೀನರ್ (ನಿರ್ವಾಹಕ)ನನ್ನು ಪೊಲೀಸರು ಬಂಧಿಸಿದ್ದು, ಲಾರಿಯಲ್ಲಿದ್ದ ಮತ್ತೊಬ್ಬ ಆರೋಪಿ ಪೊಲೀಸರನ್ನು ಕಂಡು ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.


