ಉಡುಪಿ; ನೀರಿನ ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಣಿಯೂರಿನಲ್ಲಿ ನಡೆದಿದೆ, ಪಣಿಯೂರು ಸೆಂಟರ್ ನಿವಾಸಿ ಕೃಷ್ಣ ಮೂಲ್ಯ (22) ಮೃತ ಯುವಕ.
ಕೃಷ್ಣ ಮೂಲ್ಯ ಅವರು ಮಂಗಳವಾರ ಮುಂಜಾನೆ ಪಣಿಯೂರು ಪೇಟೆಗೆ ಹಾಲು ಖರೀದಿಸಲು ಬಂದಿದ್ದರು. ಹಾಲು ಖರೀದಿಸಿ ಮರಳಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತವಾಗಿದೆ. ಇವರ ಸ್ಕೂಟರ್ ಮುಂದೆ ಚಲಿಸುತ್ತಿದ್ದ ನೀರಿನ ಟ್ಯಾಂಕರ್, ಕಂಚುಗರ ರಸ್ತೆಗೆ ತಿರುಗುವುದಕ್ಕಾಗಿ ಏಕಾಏಕಿ ಬಲಬದಿಗೆ ಕ್ರಾಸ್ ಮಾಡಿದೆ. ಈ ವೇಳೆ ನಿಯಂತ್ರಣ ಸಿಗದೆ ಕೃಷ್ಣ ಮೂಲ್ಯ ಅವರ ಸ್ಕೂಟರ್ ಟ್ಯಾಂಕರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣ ಮೂಲ್ಯ ಅವರು ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.


