
ಉಡುಪಿ: ಯುಎಇಯಲ್ಲಿ ನಡೆದ ಜನಪ್ರಿಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಉಡುಪಿಯ ಯುವಕ 49 ಕೋಟಿ ಮೌಲ್ಯದ ಲಾಟರಿ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟುವಿನ ನಿವಾಸಿ ಶಂತನು ಶೆಟ್ಟಿಗಾರ್ ಅಬುಧಾಬಿಯಲ್ಲಿ ನಡೆದ ಡ್ರಾದಲ್ಲಿ ಸುಮಾರು 49 ಕೋಟಿ ರೂ. ಮೌಲ್ಯದ 20 ಮಿಲಿಯನ್ ದಿರ್ಹಮ್‌ಗಳನ್ನು ಗೆದ್ದಿದ್ದಾರೆ. ಬಿಗ್ ಟಿಕೆಟ್ ಡ್ರಾದಲ್ಲಿ ಹಲವಾರು ಇತರ ಬಹುಮಾನಗಳು ಇದ್ದವು, ಐವರು ವಿಜೇತರು ತಲಾ 1 ಮಿಲಿಯನ್ ದಿರ್ಹಮ್‌ಗಳು ಮತ್ತು ಒಂದು ಐಷಾರಾಮಿ ಕಾರನ್ನು ಗೆದ್ದಿದ್ದಾರೆ.
ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಓಮನ್ನಲ್ಲಿ ರಿಟೇಲ್ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.
ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಸೇರಿಕೊಂಡು ಜಂಟಿಯಾಗಿ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಒಟ್ಟು 49 ಕೋಟಿ ರೂಪಾಯಿನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಂತನು ಹೇಳಿಕೊಂಡಿದ್ದಾರೆ. ಇನ್ನು ಶಂತನು ಲಾಟರಿಯಲ್ಲಿ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂತಸ, ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ. ಗ್ರಾಮಸ್ಥರು ಮತ್ತು ಸ್ನೇಹಿತರು ಶಂತನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಲೈವ್ ಡ್ರಾವನ್ನು ಸಾವಿರಾರು ಜನರು ವೀಕ್ಷಿಸುತ್ತಿದ್ದರು. ಬಹುಮಾನ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಶಂತನು, ಕಾರ್ಯಕ್ರಮ ಆಯೋಜಕರೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘2021ರಿಂದಲೂ ಬಿಗ್ ಟಿಕೆಟ್ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.


