ಉಡುಪಿ: ಕರಾವಳಿ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರಾವಳಿ ಮತ್ತು ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಉಚ್ಚಿಲ ದಸರಾ ಪ್ರಯುಕ್ತ ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಳು ಭಾಷೆಯಲ್ಲಿ ಶುಭಾಶಯ ಕೋರುವ ಮೂಲಕ ಭಾಷಣ ಆರಂಭಿಸಿದ ಅವರು, ಉಪಮುಖ್ಯಮಂತ್ರಿಯಾಗಿದ್ದಾಗ ದೇವಿಯ ಆಶೀರ್ವಾದ ಪಡೆದಿದ್ದೆ. ಇದೀಗ ಮುಖ್ಯಮಂತ್ರಿಯಾಗಿ ಪ್ರಜಾಸೇವಕನಾಗಿ ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಎಂದರು.
ಮಹಿಳಾ ಸಬಲೀಕರಣವೇ ಸಮಾಜದ ಪ್ರಗತಿಗೆ ಪ್ರಮುಖ ದಾರಿ ಎಂದು ಪ್ರತಿಪಾದಿಸಿದ ಅವರು, ಮಹಾಲಕ್ಷ್ಮೀ ಸಂಪತ್ತಿನ ಸಂಕೇತವಾದರೆ, ಸರಸ್ವತಿ ಜ್ಞಾನದ ಸಂಕೇತ ಮತ್ತು ಮಹಾಕಾಳಿ ಶಕ್ತಿಯ ಸಂಕೇತ ಎಂದು ಹೇಳಿದರು. ಮೀನುಗಾರ ಮಹಿಳೆಯರು ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಬಂದರು ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಘೋಷಣೆ ಮಾಡಲು ಸಾಧ್ಯವಿಲ್ಲ. ಬೆಂಗಳೂರಿಗೆ ಮರಳಿದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರಾವಳಿಯ ಚಿನ್ನದ ಆಭರಣ ಮತ್ತು ಮರದ ಕೆತ್ತನೆ ಕಲೆಗಳನ್ನು ಉಳಿಸುವುದರ ಜತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕಾರ್ಕಳದಲ್ಲಿ ಪಾರ್ಕ್ ನಿರ್ಮಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ದೇವಸ್ಥಾನಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ. ಯುವಕರ ವಲಸೆಯನ್ನು ತಡೆದು ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಭಾಷೆಯನ್ನು ಸಂರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.


