Monday, June 24, 2024
HomeUncategorizedತುಳು ಭಾಷೆಗೆ ಸ್ಥಾನಮಾನ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ 'ತುಲುವೆರೆ ಪಕ್ಷ' ಅಸ್ಥಿತ್ವಕ್ಕೆ!!

ತುಳು ಭಾಷೆಗೆ ಸ್ಥಾನಮಾನ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ‘ತುಲುವೆರೆ ಪಕ್ಷ’ ಅಸ್ಥಿತ್ವಕ್ಕೆ!!

spot_img
- Advertisement -
- Advertisement -

ಬೆಳ್ತಂಗಡಿ: ತುಳುವರ ಅಸ್ಮಿತೆಯ ಉಳಿವಿಗಾಗಿ ಹಾಗೂ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ, ದೌರ್ಜನ್ಯ, ಅಸಮಾನತೆಯಿಂದ ನೊಂದು, “ತುಲುವೆರೆ ಪಕ್ಷ” ಎಂಬ ರಾಜಕೀಯ ಪಕ್ಷವನ್ನು ಕೇಂದ್ರ ಚುನಾವಣಾ ಆಯೋಗ ದೆಹಲಿಯಲ್ಲಿ ನೋಂದಾಯಿಸಿದ್ದು ಭಾರತ ದೇಶದ ಅಧಿಕೃತ ನೋ೦ದಾಯಿತ ಪಕ್ಷವೆಂದು ಮಾನ್ಯತೆ ದೊರೆತಿದೆ ಎಂದು‌ ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ.ಹೇಳಿದರು. ‌

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತುಳುನಾಡಿನ ಸಮಗ್ರ ಅಭಿವೃದ್ಧಿ, ತುಳು ಭಾಷೆಗೆ ಸ್ಥಾನಮಾನ, ತುಳುನಾಡು ರಾಜ್ಯ ರಚನೆ, ತುಳುನಾಡಿನ ನದಿ ಮತ್ತು ನದಿ ಮೂಲಗಳ ಸಂರಕ್ಷಣೆ, ಜ್ಞಾನಧಾರಿತ ಉದ್ಯಮಗಳ ಮೂಲಕ ತುಳುನಾಡಿನ ಜನತೆಗೆ ಉದ್ಯೋಗ ಸೃಷ್ಟಿ, ತುಳು ಸಂಸ್ಕೃತಿಯ ಸಂರಕ್ಷಣೆ, ತುಳು ಭಾಷೆಯಲ್ಲಿ ಶಿಕ್ಷಣ ಮತ್ತು ಆಡಳಿತ ಸೇರಿದಂತೆ ಸ್ವಚ್ಛ, ಸುಂದರ, ಸೌಹಾರ್ದ, ಶಾಂತಿಯ ಸಮೃದ್ಧ ತುಳುನಾಡು ಕಟ್ಟುವ ಮೂಲಕ ಮತ್ತೊಮ್ಮೆ ಭಾರತ ದೇಶದಲ್ಲಿ ತುಲುಂಗ ಕಂಗೊಳಿಸುವಂತೆ ಮಾಡುವುದೇ ಪಕ್ಷದ ಉದ್ದೇಶವಾಗಿದೆ ಎಂದರು.

ಭರತ ಖಂಡದಲ್ಲಿ ಸತಿಯಪುತ್ರ, ಆಳ್ವಖೇಡ, ಹುಳು ದೇಸ, ತುಲುಂಗ ತೌಳವ, ತುಳುನಾಡು, ತುಳು ರಾಜ್ಯ ಎಂದು ಕರೆಯಲ್ಪಟ್ಟ ಸ್ವತಂತ್ರವಾಗಿ ಮೆರೆದ ಇಂದಿನ ಉತ್ತರ ಕೇರಳ ಪ್ರಾಂತ್ಯ, ಕರಾವಳಿ ಕರ್ನಾಟಕ ಪ್ರಾಂತ್ಯ ಮತ್ತು ಮಲೆನಾಡು ಕರ್ನಾಟಕ ಪ್ರಾಂತ್ಯಗಳು ಇಂದಿನ ಆಧುನಿಕ ಸ್ವತಂತ್ರ ಭಾರತ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಈ ಪ್ರಾಂತ್ಯಗಳ ಜನರ ನಾಡು, ನುಡಿ, ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಕೌಳವ ನಾಗರೀಕತೆಯ ಮೂಲವಾದ ನದಿಗಳ ಮೂಲವನ್ನು ವಿಕೃತಿಗೊಳಿಸಿ ಬಯಲು ಸೀಮೆಗೆ ತಿರುಗಿಸುವ ವಿಫಲ ಪ್ರಯತ್ನದಲ್ಲಿ ನಮ್ಮನ್ನು ಸದ್ಯ ಆಳುತ್ತಿರುವ ನಾಡಿನವರು ನಿರತರಾಗಿದ್ದಾರೆ ಎಂದರು.

1956ರಲ್ಲಿ ಭಾಷಾವಾರು ರಾಜ್ಯಗಳು ರಚನೆಯಾಗುವಾಗ ತುಳು ಭಾಷಿಕ ಪ್ರಾಂತ್ಯಗಳನ್ನು ಅನ್ಯಾಯವಾಗಿ ವಿಭಾಗಿಸಿ ಕನ್ನಡನಾಡು ಮತ್ತು ಮಲಯಾಳ ನಾಡಿಗೆ ಹಂಚುವ ಮೂಲಕ ತುಳು ಅಸ್ಮಿತೆಯನ್ನು ನಾಶ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯಿತು. ತುಳುವರ ನಾಡು, ನುಡಿಯ ಅಸ್ಮಿತೆಯ ಕೂಗಿಗೆ ಕರ್ನಾಟಕ ಸರ್ಕಾರ, ಕೇರಳ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಈ ಸರ್ಕಾರಗಳ ಆಳ್ವಿಕೆಯನ್ನು ನಡೆಸಿದ ಪಕ್ಷಗಳು ಸ್ಪಂದಿಸಲಿಲ್ಲ, ತುಳುವರ ತುಳು ಭಾಷೆಯ ಸ್ಥಾನಮಾನದ ಕೂಗು ಅರಣ್ಯ ರೋಧನವಾಗಿಯೇ ಉಳಿದಿದೆ. ಹೀಗೆ ನಮ್ಮನ್ನು ಆಳಿದ ಎಲ್ಲಾ ಪಕ್ಷಗಳು ತುಳು ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ನಾಶ ಮಾಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನವೀನ್ ಅಡ್ಕದಬೈಲ್,ಕೋಶಾಧಿಕಾರಿ ರಾಜೇಶ್ ಕುಲಾಲ್, ತಾಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ಎಂ. ಕಾರ್ಯದರ್ಶಿ ಸತೀಶ್ ಎಸ್.ಎನ್. ಜೊತೆ ಕಾರ್ಯದರ್ಶಿ ಸುರೇಖಾ ಲೋಬೊ,ಪುತ್ತೂರು ಘಟಕದ ಅಧ್ಯಕ್ಷ ವಿಜೇತ್ ರೈ, ಹಾಗೂ ಕಾರ್ಯಕರ್ತರಾದ ಸಂಪತ್ ಬೆದ್ರ, ಅರವಿಂದ್ ಪಂಡಿತ್, ಉಮೇಶ್ ಕುಲಾಲ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!