ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೋಗೂರಿನಲ್ಲಿ ಬೆಡ್ ಶೀಟ್ ಮಾರಾಟಕ್ಕೆಂದು ಬಂದು 7 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕದ್ದ ಕಳ್ಳರು ಕೇವಲ 65 ಸಾವಿರ ರೂ.ಗೆ ಮಾರಾಟ ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳು ಪಾಂಡವಪುರ ಮೂಲದ ಮಂಜುನಾಥ್, ವೆಂಕಟೇಶ್. ಬಂಧಿತರಿಂದ 7 ಲಕ್ಷ ರೂ. ಮೌಲ್ಯದ 26 ಕೆ.ಜಿ. ತೂಕದ ಶ್ರೀಗಂಧದ ಮರ ಜಪ್ತಿ ಮಾಡಲಾಗಿದೆ.
ಪ್ರಕರಣದ ವಿವರ: ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೋಗೂರಿಗೆ ವ್ಯಾಪಾರಿಗಳಿಬ್ಬರು ಬೆಡ್ ಶೀಟ್ ಮಾರಾಟಕ್ಕೆಂದು ಬಂದಿದ್ದರು. ಈ ವೇಳೆಯಲ್ಲಿ ಮಾರ್ಗ ಮಧ್ಯೆ ಚೆನ್ನಾರೆಡ್ಡಿ ಎಂಬುವರ ಜಮೀನಿನಲ್ಲಿದ್ದ 20 ವರ್ಷದ ಹಳೆಯ ಸುಮಾರು 20 ಅಡಿ ಉದ್ದದ ಶ್ರೀಗಂಧದ ಮರ ಗಮನಿಸಿದ್ದರು. ಮತ್ತೆ ಆರೋಪಿಗಳಿಬ್ಬರು ಜುಲೈ 6ರಂದು ರಾತ್ರಿ ಮತ್ತೆ ಇದೇ ಜಾಗಕ್ಕೆ ಬಂದು, ಮರವನ್ನು ಕಡಿದು ಅದನ್ನು ಸಣ್ಣ ಸಣ್ಣ ತುಂಡು ಮಾಡಿ ತಮ್ಮ ವಾಹನದಲ್ಲಿ ತುಂಬಿ ಪರಾರಿಯಾಗಿದ್ದರು.
ಆದರೆ ಗಂಧದ ಮರದ ಮಾರುಕಟ್ಟೆ ಬೆಲೆಯ ಬಗ್ಗೆ ಆರೋಪಿಗಳಿಗೆ ಸೂಕ್ತ ಮಾಹಿತಿ ಅವರಿಬ್ಬರಿಗೂ ಇರಲಿಲ್ಲ.
ಆರೋಪಿಗಳು ಮರ ಮಾರಾಟಕ್ಕೆ ಗಿರಾಕಿಗಳನ್ನು ಹುಡುಕುತಿದ್ದಾಗ ಹಾಸನದ ವ್ಯಾಪಾರಿ ಇದನ್ನು ಖರೀದಿಸಲು ಮುಂದಾಗಿದ್ದಾರೆ. ಆರೋಪಿಗಳಿಗೆ ಕೇವಲ 65 ಸಾವಿರ ರೂ. ಕೊಟ್ಟು ಶ್ರೀಗಂಧದ ತುಂಡುಗಳನ್ನು ವ್ಯಾಪಾರಿ ಖರೀದಿಸಿದ್ದರು. ಇತ್ತ ಚೆನ್ನಾರೆಡ್ಡಿ ಮರುದಿನ ಜಮೀನಿನಲ್ಲಿದ್ದ ಮರ ಕಡಿದಿರುವುದನ್ನು ಗಮನಿಸಿದ್ದರು. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.