ನವದೆಹಲಿ: ಕೋವಿಡ್-19 ತಡೆಗಟ್ಟಲು ಘೋಷಿಸಿರುವ ಲಾಕ್ ಡೌನ್ ನಿಂದಾಗಿ 2020-21 ಶೈಕ್ಷಣಿಕ ವರ್ಷ ಅಧಿಕೃತವಾಗಿ ವಿಳಂಬವಾಗಲಿದೆ. ಜುಲೈನಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಸೆಪ್ಟೆಂಬರ್ ನಿಂದ ಆರಂಭಿಸುವಂತೆ ಯು.ಜಿ.ಸಿಗೆ ಸಮಿತಿ ಶಿಫಾರಸ್ಸು ಮಾಡಿದೆ.
ಮಾರ್ಚ್ 16 ರಿಂದ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಿವೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಕ್ಲಾಸ್ ರೂಮ್ ಶಟ್ ಡೌನ್ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ.
ಕ್ಲಾಸ್ ರೂಮ್ ಶಟ್ ಡೌನ್ ಆಗಿರುವುದರಿಂದ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಕುರಿತು ಯು.ಜಿ.ಸಿ ರಚಿಸಿದ ಏಳು ಸದಸ್ಯರ ಸಮಿತಿ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಸೆಪ್ಟೆಂಬರ್ ನಿಂದ ಕಾಲೇಜುಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ.
ಸಮಯಕ್ಕೆ ಸರಿಯಾಗಿ ಯಾವ ಪ್ರವೇಶ ಪರೀಕ್ಷೆಗಳು ನಡೆಯುವುದಿಲ್ಲವಾದ್ದರಿಂದ, ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ವೇಳಾಪಟ್ಟಿಯಂತೆ ನಡೆಯಲು ಸಾಧ್ಯವಾಗದ ವರ್ಷಾಂತ್ಯ ಅಥವಾ ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ.
ಸಮಿತಿ ನೀಡಿರುವ ವರದಿ ಅನುಸಾರ, ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪರೀಕ್ಷೆಗಳ ಕುರಿತು ಯು.ಜಿ.ಸಿ ಮಾರ್ಗಸೂಚಿ ಹೊರಡಿಸಲಿದೆ.