Tuesday, May 21, 2024
Homeಕರಾವಳಿಮಂಗಳೂರು ವಿವಿಯಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ?!

ಮಂಗಳೂರು ವಿವಿಯಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ?!

spot_img
- Advertisement -
- Advertisement -

ಮಂಗಳೂರು ವಿವಿಯಲ್ಲಿ ಹಿಂದೊಮ್ಮೆ ಉಪ ಕುಲಪತಿಯಾಗಿದ್ದ ಭೈರಪ್ಪರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಸಭ್ಯ, ಸಜ್ಜನ ವ್ಯಕ್ತಿ ಎನ್ನಲಾಗಿರುವ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಉಪ ಕುಲಪತಿ ಆಗಿದ್ದಾರೆ. ಆದರೆ, ಈ ಬಾರಿಯೂ ಮತ್ತೊಂದು ಅವ್ಯವಹಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.

ಯುಜಿಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಲ್ಲಿ 330 ಲ್ಯಾಪ್ ಟಾಪ್ ಗಳನ್ನು ವಿತರಿಸಲು ನಿರ್ಧಾರ ಮಾಡಲಾಗಿತ್ತು. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ, ಅದನ್ನು ಬದಿಗಿಟ್ಟು ಏಕಾಏಕಿ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್ಟಾಪ್ ಖರೀದಿಸಲಾಗಿದ್ದು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ.

ಯುಜಿಸಿ ಅನುದಾನದಲ್ಲಿ ಸೆಡ್ಯುಲ್ಡ್ ಕಾಸ್ಟ್ ಸಬ್ ಪ್ಲಾನ್(ಎಸ್‌ಸಿಎಸ್‌ಪಿ) ಮತ್ತು ಟ್ರೈಬಲ್ ಸಬ್ ಪ್ಲಾನ್(ಐಎಸ್‌ಪಿ) ಯೋಜನೆಯಲ್ಲಿ ಮಂಗಳೂರು ವಿವಿಯ ಎಸ್‌ಸಿ.ಎಸ್‌ಟಿ ವಿದ್ಯಾರ್ಥಿಗಳಿಗೆ ವಿತರಿಸಲು ಉದ್ದೇಶಿಸಿರುವ ಕೋಟಿ ರೂಪಾಯಿ ಮೊತ್ತದ ಲ್ಯಾಪ್‌ಟಾಪ್ ಖರೀದಿಯಲ್ಲಿ ಅಕ್ರಮವೆಸಗಿರುವುದು ಇದೀಗ ಕಂಡುಬಂದಿದೆ. ಈ ಅಕ್ರಮದಲ್ಲಿ ವಿವಿ ಉಪಕುಲಪತಿ, ಸಿಂಡಿಕೇಟ್ ಸದಸ್ಯ, ಕಿಯೋನಿಕ್ಸ್ ಅಧ್ಯಕ್ಷರ ಹೆಸರು ಕೇಳಿಬರುತ್ತಿದೆ.

ಮಂಗಳೂರು ವಿವಿ ಈ ಹಿಂದಿನ ಉಪಕುಲಪತಿ ಪ್ರೊ. ಬೈರಪ್ಪ ಕಾಲವಧಿಯಲ್ಲಿ ನಡೆದ ಸೋಲಾರ್, ಸಿಸಿ ಕ್ಯಾಮರಾ ಖರೀದಿ ಪ್ರಕರಣದಂತೆ ಕಂಡುಬಂದಿದೆ. ಮಂಗಳುರು ವಿವಿ ಅಧಿಕಾರಿಗಳು ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಖರೀದಿಯಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆಸಿ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಮಂಗಳಗಂಗೋತ್ರಿ ಎಸ್‌ಸಿ.ಎಸ್‌ಟಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ತಂಡ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿದೆ.

ಈ ವಿಚಾರ ಕೇಳಿ ಬರುತ್ತಿದ್ದಂತೆಯೇ ವಿವಿಯ ಕೆಲವು ಎಸ್‌ಸಿಎಸ್‌ಟಿ ವಿದ್ಯಾರ್ಥಿ, ಇತಿಹಾಸ ವಿಭಾಗದ ಪ್ರೋಪೆಸರ್ ಹಾಗೂ ಓರ್ವ ಕಾನೂನು ಪಂಡಿತ ಸಿಂಡಿಕೇಟ್ ಸದಸ್ಯರನ್ನೊಳಗೊಂಡ ತಂಡ ಇಡೀ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬುದಾಗಿ ವಿವಿಗೆ ವಿವರಣೆ ನೀಡಿ ಪ್ರಕರಣ ಮುಚ್ಚಿಹಾಕಲು ವ್ಯವಸ್ಥೆ ಮಾಡಿದೆ.

ಮಂಗಳೂರು ವಿವಿಯ ಎಸ್‌ಸಿ.ಎಸ್‌ಟಿ ವಿದ್ಯಾರ್ಥಿಗಳಿಗೆ ವಿತರಿಸಲು ನಿರ್ಧಿಷ್ಟ ಮಾನದಂಡಗಳನ್ನು ನೀಡಿ ವಿವಿ ಸಿಂಡಿಕೇಟ್ ಮಂಡಳಿ ನಿರ್ಣಯ ಪಡೆದು 2021ರ ಸೆ.28 ರಂದು ಇ-ಟೆಂಡರ್ ಕರೆಯಲಾಗಿದ್ದು, ಒರ್ಕಿಡ್(ಕನಿಷ್ಟ ದರ 62,950ರೂ.), ಸಹರಾ (ಕನಿಷ್ಟ ದರ 78,300ರೂ.), ಯು.ಕ ಇಂಟರ್‌ನ್ಯಾಶಿನಲ್(ಕನಿಷ್ಟ ದರ 79,532ರೂ.) ಸಂಸ್ಥೆ ಇ-ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಇದರಲ್ಲಿ ಸಾಯಿರಾಮ್ ಶೆಟ್ಟಿ ಎಂಬವರ ಒಡೆತನದ ಒರ್ಕಿಡ್ ಸಂಸ್ಥೆ ಕನಿಷ್ಟ ದರ 62,950ರೂ.ನ್ನು ಅಂಗೀಕರಿಸಿ ಖರೀದಿ ಸಮಿತಿ ಸಭೆಗೆ ಮಂಡಿಸಲಾಗಿತ್ತು. ಲ್ಯಾಪ್‌ಟಾಪ್ ಖರೀದಿಗೆ ವಿವಿ ಸಿಂಡಿಕೇಟ್ ಮಂಡಳಿ ನಿರ್ಣಯ ಪಡೆದು ಟೆಂಡರ್ ಕಾರ್ಯ ಪೂರ್ಣಗೊಂಡರೂ ವಿವಿ ಉಪಕುಲಪತಿ ಮಾತ್ರ ಸಿಂಡಿಕೇಟ್ ನಿರ್ಣಯ ಪಡೆಯದೆಯೇ ಏಕಾಏಕಿ ಒರ್ಕಿಡ್ ಸಂಸ್ಥೆಗೆ ನೀಡಿದ ಟೆಂಡರ್‌ನ್ನು ಹಿಂಪಡೆದು ಕಿಯೋನಿಕ್ಸ್ ಜತೆ ನೇರವಾಗಿ ಲ್ಯಾಪ್‌ಟಾಪ್ ಡೀಲ್ ಕುದುರಿಸಿದ್ದಾರೆ.

ಸೆ.28ರಂದು ಲ್ಯಾಪ್ಟಾಪ್ ಖರೀದಿ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಯುಜಿಸಿ ಅನುದಾನ ಹೆಚ್ಚುವರಿಯಾಗಿ ಬಂದಿದೆ ಎನ್ನಲಾಗುತ್ತಿದ್ದು, 3.5 ಕೋಟಿ ಅನುದಾನ ಇರುವ ಬಗ್ಗೆ ವಿವಿಯ ಆಡಳಿತಕ್ಕೆ ತಿಳಿದುಬಂದಿತ್ತು. ಪರಿಶಿಷ್ಟ ಜಾತಿ ವಿಭಾಗಕ್ಕೇ ಈ ಅನುದಾನ ವ್ಯಯ ಮಾಡಬೇಕಾಗಿದ್ದರಿಂದ ಆಗಷ್ಟೇ ನಿರ್ಣಯಿಸಿದ್ದ ಟೆಂಡರ್ ಪ್ರಕ್ರಿಯೆಯನ್ನು ಬದಿಗಿಟ್ಟು ತರಾತುರಿಯಲ್ಲಿ ಕಿಯೋನಿಕ್ಸ್ ಸಂಸ್ಥೆಯ ಜೊತೆ ಲ್ಯಾಪ್ಟಾಪ್ ಡೀಲ್ ಕುದುರಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಆಗಿದ್ದರೂ, ಅದನ್ನು ಬದಿಗೊತ್ತಿ ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಕಿಯೋನಿಕ್ಸ್ ಸಂಸ್ಥೆಯಿಂದ ವ್ಯವಹಾರ ಮಾಡಲಾಗಿದೆ.

ಒಂದರ ಬೆಲೆ 99,750 ರೂ.ನಂತೆ ಒಟ್ಟು 330 ಲ್ಯಾಪ್ ಟಾಪ್ ಖರೀದಿಸಲು ವಿವಿಯ ಉಪ ಕುಲಪತಿ ಮತ್ತು ಕೆಲವು ಸಿಂಡಿಕೇಟ್ ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ ಅನ್ನುವ ಆರೋಪಗಳಿವೆ. ಕಳೆದ ಅಕ್ಟೋಬರ್ ಕೊನೆಯಲ್ಲಿ ಈ ಬಗ್ಗೆ ಖರೀದಿ ಪ್ರಕ್ರಿಯೆ ನಡೆದಿದ್ದು ನವೆಂಬರ್ ಆರಂಭದಲ್ಲಿ ನೂರು ಲ್ಯಾಪ್ ಟಾಪ್ ಖರೀದಿಸಿ, ಸ್ನಾತಕೋತ್ತರ ಮಕ್ಕಳಿಗೆ ವಿತರಿಸಲಾಗಿದೆ ಎನ್ನುವ ಮಾಹಿತಿಯಿದೆ. ವಿಶೇಷ ಅಂದ್ರೆ, ಈ ಹಿಂದಿನ ಟೆಂಡರ್ ಯಾಕೆ ರದ್ದಾಯ್ತು ಅನ್ನುವುದಕ್ಕೆ ಲ್ಯಾಪ್‌ಟಾಪ್ ಕೀಬೋರ್ಡ್ ನಲ್ಲಿ ಲೈಟ್ ಬ್ರೈಟ್ ಇಲ್ಲ ಎಂಬ ಕ್ಷುಲ್ಲಕ ಕಾರಣವನ್ನು ವಿವಿಯ ತಾಂತ್ರಿಕ ಸಮಿತಿ ನೀಡಿದೆ. ಈ ಬಗ್ಗೆ ಆರ್ಕಿಡ್ ಸಂಸ್ಥೆಯು ತಾನು ಬಿಡ್ ಮಾಡಿದ್ದ 62,950 ರೂ. ಕನಿಷ್ಠ ದರದಲ್ಲೇ ಕೀ ಬೋರ್ಡ್ ಬ್ರೈಟ್ ಲೈಟ್ ಅಳವಡಿಸಿ ನೀಡುವುದಾಗಿ ತಿಳಿಸಿದರೂ ವಿವಿ ಅಧಿಕಾರಿಗಳು ನಿರಾಕರಿಸಿದ್ದಾರೆ ಅನ್ನೋದನ್ನು ಸಾಯಿರಾಂ ಶೆಟ್ಟಿ ತಿಳಿಸಿದ್ದಾರೆ.

ಕಿಯೋನಿಕ್ಸ್ ಸರಕಾರದ ಅಂಗಸಂಸ್ಥೆಯಾಗಿದ್ದು, ಯಾವುದೇ ಇಲೆಕ್ಟ್ರಾನಿಕ್ ಪರಿಕರಗಳನ್ನು ಸಂಸ್ಥೆಯಿಂದ ಸ್ವೀಕರಿಸಲು ವಿವಿಯಿಂದ ಪ್ರತ್ಯೇಕ ಟೆಂಡರ್ ಕರೆಯಬೇಕಾದ ಅವಶ್ಯಕತೆಯಿಲ್ಲ. 4ಜಿ ನಿಯಮದ ಪ್ರಕಾರ ಒಂದು ಕೋಟಿ ರೂ. ವರೆಗಿನ ಉಪಕರಣಗಳನ್ನು ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಖರೀದಿಸಲು ಅವಕಾಶ ಇದೆ. ಇದೇ ನೀತಿಯನ್ನು ನೆಪವಾಗಿಟ್ಟು ವಿವಿಯ ಆಡಳಿತ ಲ್ಯಾಪ್ಟಾಪ್ ಖರೀದಿಗೆ ನಿರ್ಣಯ ಕೈಗೊಂಡಿದೆ ಎನ್ನಲಾಗುತ್ತಿದೆ. ಒಟ್ಟು 330 ಲ್ಯಾಪ್ ಟಾಪ್ ಗಳನ್ನು ಮೂರು ಹಂತದಲ್ಲಿ ಪಡೆಯಲು ನಿರ್ಣಯಿಸಲಾಗಿದ್ದು, ಮೊದಲ ಹಂತದಲ್ಲಿ 100 ಲ್ಯಾಪ್ ಟಾಪ್ ಖರೀದಿ ಪ್ರಕ್ರಿಯೆ ಮುಗಿದಿದೆ.

ಮಂಗಳೂರು ವಿವಿಗೆ ಸಂಬಂಧಿಸಿ ಯಾವುದೇ ವಸ್ತು ಖರೀದಿಸುವುದಿದ್ದರೂ, 1 ಲಕ್ಷ ರೂ. ಮೊತ್ತದ ವರೆಗಿನ ಖರೀದಿಗೆ ಉಪ ಕುಲಪತಿಗಳಿಗೆ ಸ್ವಯಂ ನಿರ್ಧರಿಸಲು ಅಧಿಕಾರ ಇರುತ್ತದೆ. 1ರಿಂದ 5 ಲಕ್ಷ ವರೆಗಿನ ಖರೀದಿ ಪ್ರಕ್ರಿಯೆಗೆ ಜಿಲ್ಲಾ ಬುಲೆಟಿನ್ ಟೆಂಡರ್, 5 ಲಕ್ಷ ರೂ.ಗಿಂತ ಅಧಿಕ ಮೊತ್ತದ ಖರೀದಿಗೆ ವಿವಿಯ ಸಿಂಡಿಕೇಟ್ ಸಭೆಯ ನಿರ್ಣಯ ಅಗತ್ಯ. ಆದರೆ ಲ್ಯಾಪ್‌ಟಾಪ್ ಖರೀದಿಯಲ್ಲಿ ಈ ನಿಯಮವನ್ನೇ ಉಪ ಕುಲಪತಿ ಗಾಳಿಗೆ ತೂರಿದ್ದಾರೆ ಎನ್ನುವ ಆರೋಪಗಳಿವೆ.

ಕೇವಲ 62,950 ರೂ. ಬೆಲೆಯ ಲ್ಯಾಪ್‌ ಟಾಪ್‌ ಅನ್ನು ಕಿಯೋನಿಕ್ಸ್ ಸಂಸ್ಥೆಯಿಂದ 99,750 ರೂ. ಕೊಟ್ಟು ಖರೀದಿಸಿರುವುದು ಅಕ್ರಮ. ಒಂದು ಬಾರಿ ಸಿಂಡಿಕೇಟ್ ನಿರ್ಣಯ ಪಡೆದು ಕನಿಷ್ಟ ದರಪಟ್ಟಿ ಅಂಗೀಕರಿಸಿ, ಖರೀದಿ ಸಮಿತಿ ಸಭೆಯಲ್ಲಿ ಮಂಡಿಸಿದ ಬಳಿಕ ಏಕಾಏಕಿ ಸಿಂಡಿಕೇಟ್ ಸಮಿತಿಯ ಗಮನಕ್ಕೇ ಬರದಂತೆ ಟೆಂಡರ್ ರದ್ದುಗೊಳಿಸಿ ಹಿಂಬಾಗಿಲ ವ್ಯವಹಾರ ನಡೆಸಿದ್ದು ಇನ್ನೊಂದು ಅಕ್ರಮ.

ಇದೇ ರೀತಿಯ ಅಕ್ರಮಗಳು ಈ ಹಿಂದಿನ ಭ್ರಷ್ಟ ವಿಸಿ ಎನ್ನಲಾದ ಭೈರಪ್ಪರ ಕಾಲದಲ್ಲಿಯೂ ನಡೆದಿತ್ತು. ಈಗ ನಡೆದಿರುವ ಅವ್ಯವಹಾರದಲ್ಲಿ ವಿವಿ ಕುಲಪತಿ ಸೇರಿ ಸಿಂಡಿಕೇಟ್ ಸದಸ್ಯರು ಮತ್ತು ಕಿಯೋನಿಕ್ಸ್ ಅಧ್ಯಕ್ಷರು ಕೂಡ ಪಾಲುದಾರಿಯೇ ಅನ್ನುವ ಅನುಮಾನ ಕೇಳಿ ಬರುತ್ತಿದೆ.

- Advertisement -
spot_img

Latest News

error: Content is protected !!