Tuesday, May 21, 2024
Homeಕರಾವಳಿಉಡುಪಿಆರೋಗ್ಯ ಇಲಾಖೆ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು; ಡಿಸಿ ಕೂರ್ಮಾರಾವ್

ಆರೋಗ್ಯ ಇಲಾಖೆ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು; ಡಿಸಿ ಕೂರ್ಮಾರಾವ್

spot_img
- Advertisement -
- Advertisement -

ಉಡುಪಿ: ಆರೋಗ್ಯ ಇಲಾಖೆ ಸೂಚಿಸುವ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಕೈಗೊಳ್ಳಬೇಕು ಹಾಗೂ ನಿಫಾ ವೈರಸ್‌ ಬಗ್ಗೆ ಜನರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ.ಹೇಳಿದರು.

ತಮ್ಮ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ನಿಫಾ ವೈರಸ್‌ ನಿಯಂತ್ರಣ ಹಾಗೂ ಜಿಲ್ಲಾ ಮಟ್ಟದ ಕೋವಿಡ್‌ ನಿಯಂತ್ರಣ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆ ರಾಜ್ಯ ಕೇರಳದಲ್ಲಿ ನಿಫಾ ಸೋಂಕು ಕಂಡುಬರುತ್ತಿದೆ. ಅಲ್ಲಿನ ಜನರು ನಾನಾ ಕಾರಣಗಳಿಂದ ಉಡುಪಿಗೆ ಬಂದು ಹೋಗುತ್ತಿದ್ದಾರೆ. ಆದ್ದರಿಂದ ರಾಜ್ಯ ಸರಕಾರವು ಕೇರಳದಿಂದ ಬರುವುದು ಹಾಗೂ ಹೋಗುವುದನ್ನು ನಿರ್ಬಂಧಿಸಿದೆ. ಆದರೂ ಎಚ್ಚರಿಕೆ ಅಗತ್ಯ ಎಂದರು.

ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ 72 ಗಂಟೆಯೊಳಗಿನ ಕೋವಿಡ್‌ ಸೋಂಕಿನ ನೆಗೆಟಿವ್‌ ವರದಿಯ ಜತೆಗೆ ಕಡ್ಡಾಯವಾಗಿ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಹೊರ ದೇಶ, ಹೊರ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೆ ಬಂದು ವಿದ್ಯಾರ್ಥಿ ನಿಲಯಗಳಲ್ಲಿ ತಂಗುವವರನ್ನು ಕಾಲ-ಕಾಲಕ್ಕೆ ಕೋವಿಡ್‌ ಪರೀಕ್ಷೆಗೊಳಪಡಿಸಬೇಕು. ಹೊರಗಿನಿಂದ ಬಂದವರ ಮಾಹಿತಿಯನ್ನು ನೆರೆ-ಹೊರೆಯವರು ಇಲಾಖೆ ನೀಡಬೇಕು. ಜತೆಗೆ ಪ್ರತೀ ಶಾಲಾ-ಕಾಲೇಜುಗಳಿಗೆ ಒಬ್ಬ ಕೋವಿಡ್‌ ನೋಡಲ್‌ ಅಧಿಕಾರಿಯನ್ನು ನೇಮಿಸಿ ಅಲ್ಲಿನ ಕೋವಿಡ್‌ ಸೋಂಕಿನ ಸ್ಥಿತಿಗತಿಗಳ ಬಗ್ಗೆ ನಿಗಾವಹಿಸುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನ ಮಾತನಾಡಿ, ಪ್ರಾಣಿ, ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚು ಇರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ, ತಾಳೆ ಹಣ್ಣಿನ ರಸವನ್ನು ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರವನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಿಕೊಳ್ಳಬೇಕು. ಸೋಂಕಿತ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಹಾಗೂ ನೇರ ಸಂಪರ್ಕದಿಂದ ಸೋಂಕು ಹರಡುವ ಸಾದ್ಯತೆ ಇರುತ್ತದೆ. ಪ್ರತಿಯೊಬ್ಬರೂ ಕೈಗಳನ್ನು ಆಗಿಂದಾಗ್ಗೆ ಶುದ್ಧೀಕರಿಸಿಕೊಳ್ಳಬೇಕು. ಬಾವಲಿಗಳು ವಾಸವಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು ಎಂದು ಹೇಳಿದರು.

ಎಡಿಸಿ ಸದಾಶಿವ ಪ್ರಭು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್‌ ಡಾ| ಮಧುಸೂದನ ನಾಯಕ್‌, ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!