ಉಡುಪಿ: ಅವೈಜ್ಞಾನಿಕ ಲಾಕ್‍ಡೌನ್‍ನಿಂದ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣವಾಗದೇ ವಲಸೆ ಕಾರ್ಮಿಕರ ಮಾರಣಹೋಮಕ್ಕೆ ಕಾರಣವಾಯಿತು. ಸಾಂಕ್ರಾಮಿಕ ರೋಗವನ್ನು ಗಂಭೀರವಾಗಿ ಪರಿಗಣಿಸದೆ ಅದನ್ನು ತಮ್ಮ ರಾಜಕೀಯ ನಡೆ ಎಂಬುದಾಗಿ ಪರಿಗಣಿಸಿದ ಕೇಂದ್ರ ಸರಕಾರದ ನಡೆ ಸರಿಯಲ್ಲ, ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಗಂಟೆ ಬಡಿಯಿರಿ, ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿಸಿ ಕೊರೊನಾ ಓಡಿಸಿ ಎಂದು ಗಿಮಿಕ್ಸ್‌ಗಳಿಗೆ ಒತ್ತಾಸೆ ಕೊಟ್ಟಿದ್ದರಿಂದ ಇಂದು ಈ ರೋಗ ಹರಡುವಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೆ ದೇಶ ಬರುವಂತಾಯಿತು. ಎಂದರು.
ಈ ರೋಗ ನಿಯಂತ್ರಣ ಇನ್ನೊಂದು ಅಕ್ರಮ ದಂಧೆಗಳಿಗೆ ದಾರಿ ಮಾಡಿ ಕೊಟ್ಟಿತು. ಆದರೂ ಈ ದುರಿತ ಕಾಲದಲ್ಲಿ ಜನರ ಬದುಕಿಗೆ ಸಹಾಯವಾದುದು ಕಾಂಗ್ರೆಸ್ ಸರಕಾರ ಜಾರಿಗೆ ತಂದ ಆಹಾರ ಭದ್ರತೆ ಕಾನೂನು, ನರೇಗಾ ಕಾನೂನು ಮತ್ತು ಕಾಂಗ್ರೆಸ್ ಕಾಲದಲ್ಲಿ ನೇಮಕವಾದ ಆಶಾ ಕಾರ್ಯಕರ್ತರು ಎಂಬುದನ್ನು ವಿರೋಧ ಪಕ್ಷಗಳು ಮರೆಯಬಾರದು ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾಪು ಉತ್ತರ ವಲಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಚರಣ್ ವಿಠಲ್, ಇಂಟಕ್ ಅಧ್ಯಕ್ಷ ಉಮೇಶ್ ಕಾಂಚನ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.


