ಮಂಗಳೂರು; ಬಾಲಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ರಾತ್ರಿ ನಗರದ ತಣ್ಣೀರುಬಾವಿ ಬೀಚ್ ಸಮೀಪದಲ್ಲಿ ನಡೆದಿದೆ.
ನಗರದ ತಣ್ಣೀರುಬಾವಿ ಬೀಚ್ ಸಮೀಪದಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದ ತಂಡವೊಂದು ಕ್ರಿಕೆಟ್‌ನಲ್ಲಿ ಜಯಗಳಿಸಿ ವಾಪಸ್ಸು ತೆರಳುವಾಗ ಜಯ ಘೋಷ ಮೊಳಗಿಸಿದೆ. ಈ ಸಂದರ್ಭ ಕೆಲವು ಪೊಲೀಸರು ಯುವಕರನ್ನು ತಡೆ ಹಿಡಿದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಪೊಲೀಸ್ ಸಿಬ್ಬಂದಿಯೊಬ್ಬರು ಪುಟ್ಟ ಬಾಲಕನ ಮೇಲೆ ಬಾಸುಂಡೆ ಬರುವ ಹಾಗೆ ಎಡಕೈಗೆ ಲಾಠಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಕೆಳಕ್ಕೆ ಬಿದ್ದ ಬಾಲಕನನ್ನು ಸ್ಥಳೀಯರೇ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಸ್ಥಳೀಯರು ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಬಳಿಕ ಪಣಂಬೂರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಆ ಬಾಲಕನಿಗೆ ಮೊದಲೇ ಕಿಡ್ನಿ ಸಮಸ್ಯೆ ಇದ್ದ ಕಾರಣ ಇದೀಗ ಪೊಲೀಸರ ಏಟು ಕೂಡಾ ದೇಹದ ಮೇಲೆ ದುಷ್ಪರಿಣಾಮ ಬೀರಿದೆ. ಇವತ್ತು ಪರೀಕ್ಷೆ ಬರೆಯಬೇಕಿದ್ದ ಬಾಲಕ ಹಾಸಿಗೆ ಹಿಡಿದಿದ್ದಾನೆ. ಪೊಲೀಸರ ಈ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಮಾಹಿತಿ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.


