ಕಾಲಿವುಡ್ ನಟ ರಜನೀಕಾಂತ್ ಅವರು ಅಸ್ವಸ್ಥರಾಗಿ ಸೋಮವಾರದಂದು(ಸೆ.30) ತಡರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ. 73 ವರ್ಷದ ನಟನ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ. ಹೃದ್ರೋಗ ತಜ್ಞ ಡಾ.ಸಾಯಿ ಸತೀಶ್ ಅವರು ನಟನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮಂಗಳವಾರ ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ನಲ್ಲಿ ಅವರಿ ವಿಶೇಷ ಪರೀಕ್ಷೆ ಮಾಡಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ. ಸದ್ಯಕ್ಕೆ ಅವರಿಗೆ ಮೂರರಿಂದ ನಾಲ್ಕು ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, 2-3 ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ನಡುವೆ ನೆಚ್ಚಿನ ನಾಯಕ ಅಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರು ಶೀಘ್ರವಾಗಿ ಗುಣಮುಖರಾಗುವಂತೆ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ತಲೈವಾ ಬೇಗ ಗುಣಮುಖರಾಗಿಬನ್ನಿ ಎಂದು ಅನೇಕರು ಹಾರೈಸಿದ್ದರು. ಇದೀಗ ರಜಿನಿ ಪತ್ನಿ ಲತಾ ತಲೈವಾ ಅವರು ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಧ್ಯಮದ ಜತೆ ಮಾಹಿತಿ ಹಂಚಿಕೊಂಡಿದ್ದು, ಕೋಟ್ಯಂತರ ಅಭಿಮಾನಿಗಳ ಹಾರೈಕೆಯಿಂದ ರಜಿನಿಕಾಂತ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ರಜನಿಕಾಂತ್ ಇತ್ತೀಚೆಗಷ್ಟೇ ತಮ್ಮ ಮುಂಬರುವ ಚಿತ್ರ ‘ವೆಟ್ಟೈಯಾನ್’ ನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಟಿಜೆ ಜ್ಞಾನವೇಲ್ ನಿರ್ದೇಶನದ ವೆಟ್ಟೈಯನ್ ಆಕ್ಷನ್ ಪ್ಯಾಕ್ಡ್ ಮನರಂಜನಾ ಚಿತ್ರವಾಗಿದೆ. ಅಕ್ಟೋಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


