ಸುರತ್ಕಲ್: ಇಲ್ಲಿನಕೃಷ್ಣಾಪುರದಲ್ಲಿ ಚಿತ್ರನಟಿ ಪವಿತ್ರ ಗೌಡ ಅವರ ಕೇಸಿಗೆ ಹೋಲುವ ಪ್ರಕರಣವೊಂದು ನಡೆದಿದ್ದು, ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನಲ್ಲಿ ಶಿಕ್ಷ,ಣ ಪಡೆಯುತ್ತಿರುವ ವಿದ್ಯಾರ್ಥಿಯೋರ್ವಳಿಗೆ ಯುವಕನೊಬ್ಬ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಮಾನಸಿಕವಾಗಿ ನೊಂದ ಯುವತಿ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಆಕೆ ಕಡಿಮೆ ರಕ್ತದೊತ್ತಡದ ಸಮಸ್ಯೆಗೂ ಒಳಗಾಗಿ ಕಾಲೇಜಿಗೂ ಹೋಗಲಾಗದೆ ಮನೆಯಲ್ಲಿಯೇ ಉಳಿಯುವಂತ ಸ್ಥಿತಿಗೆ ಬಂದಿದ್ದಾಳೆ.
ಏನಿದು ಘಟನೆ?: 19 ವರ್ಷದ ಯುವತಿಯು ಈ ಹಿಂದೆ ಸುರತ್ಕಲ್ ನಲ್ಲಿ ಕಲಿಯುತ್ತಿರುವಾಗ ಮಂಜನಾಡಿ ಬಳಿಯ ಮೊಹಮ್ಮದ್ ಶಾಕಿಬ್ ಎಂಬಾತ ಚೊಕ್ಕಬೆಟ್ಟಿನ ಸ್ನೇಹಿತೆಯ ಬಳಿಯಿಂದ ನಂಬರ್ ಪಡೆದುಕೊಂಡು ಯುವತಿಗೆ ಪ್ರತಿದಿನ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಶಾಕಿಬ್ ಯುವತಿಯ ಹಿಂದೆ ಬಿದ್ದಿದ್ದು, ಪ್ರತೀದಿನ ಆಕೆಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ. ಯುವತಿಗೆ ಮರ್ಮಾಂಗದ ಚಿತ್ರವನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ವಿಚಾರವನ್ನು ಯುವತಿ ಪೋಷಕರಿಗೆ ತಿಳಿಸಿದ್ದು, ಬಳಿಕ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ, ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಶಾಕಿಬ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇನ್ನು ಯುವತಿ ಕಡೆಯವರು ಒಟ್ಟಾಗಿ ಠಾಣೆಯಲ್ಲಿ ಸೇರಿ ಯುವಕನ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಯುವಕನು ಬೆಂಗಳೂರಿನ ಹೋಟೆಲ್ ಒಂದರಲ್ಲಿ ರಿಸೆಪ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಹೋಟೆಲ್ ಗೆ ಬರುವ ಗ್ರಾಹಕರ ವಿರುದ್ದವೂ ಇಂತಹ ದುಷ್ಕೃತ್ಯ ಮಾಡಿದ್ದಾನೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.