Wednesday, September 9, 2026
HomeUncategorizedಸೆಪ್ಟೆಂಬರ್ 18ಕ್ಕೆ ಶ್ರೀನಗರ ಕಿಟ್ಟಿ - ಮೇಘನಾ ರಾಜ್ ಅಭಿನಯದ ಅಮರ್ಥ ಚಿತ್ರ ತೆರೆಗೆ!

ಸೆಪ್ಟೆಂಬರ್ 18ಕ್ಕೆ ಶ್ರೀನಗರ ಕಿಟ್ಟಿ – ಮೇಘನಾ ರಾಜ್ ಅಭಿನಯದ ಅಮರ್ಥ ಚಿತ್ರ ತೆರೆಗೆ!

- Advertisement -
- Advertisement -

ಬೆಂಗಳೂರು: ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ನಾಯಕ-ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ ‘ಅಮರ್ಥ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಿಸಿರುವ ಈ ಚಿತ್ರಕ್ಕೆ ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

ಖ್ಯಾತ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ನಟ ಡಾರ್ಲಿಂಗ್ ಕೃಷ್ಣ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ಶಿವಧ್ವಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕುಟುಂಬ ಸಮೇತ ನೋಡಬಹುದಾದ ಸಿನಿಮಾ: ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, “ಕುಟುಂಬ ಸಮೇತ ಕುಳಿತು ನೋಡಬಹುದಾದ ಅತ್ಯುತ್ತಮ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದೆ. ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರಮಂದಿರಗಳಿಗೇ ಬಂದು ಸಿನಿಮಾ ವೀಕ್ಷಿಸಿ ಬೆಂಬಲಿಸಬೇಕು,” ಎಂದು ಮನವಿ ಮಾಡಿದರು.

ನಿರ್ದೇಶಕ ಗುರು ಹೆಗ್ಡೆ ಮಾತನಾಡಿ, “ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಇದು ನನ್ನ ಮೊದಲ ಪ್ರಯತ್ನ. ಸಾರ್ವಜನಿಕರು ಚಿತ್ರ ನೋಡಿ ನೀಡುವ ಮೌಖಿಕ ಪ್ರಚಾರವೇ (Word of Mouth) ನಮ್ಮ ನಿಜವಾದ ಗೆಲುವು. ನಿಮ್ಮೆಲ್ಲರ ಸಹಕಾರದಿಂದ ‘ಅಮರ್ಥ’ ಸಿನಿಮಾವನ್ನು ಸಮರ್ಥವಾಗಿಸಿ,” ಎಂದರು.

ಎಸ್.ಎಸ್.ಎಲ್.ಸಿ ದಿನಗಳನ್ನು ನೆನಪಿಸುವ ಕಥೆ: ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ, “ಈ ಸಿನಿಮಾ ಪ್ರತಿಯೊಬ್ಬರಿಗೂ ತಮ್ಮ ಶಾಲಾ ಹಾಗೂ ಎಸ್.ಎಸ್.ಎಲ್.ಸಿ ದಿನಗಳನ್ನು ಖಂಡಿತ ನೆನಪಿಸುತ್ತದೆ. ‘ಬಹುಪರಾಕ್’ ಮತ್ತು ‘ಬುದ್ಧಿವಂತ-2’ ಚಿತ್ರಗಳ ನಂತರ ನಾನು ಹಾಗೂ ಮೇಘನಾ ರಾಜ್ ಮತ್ತೆ ಒಂದಾಗಿ ನಟಿಸಿರುವ ಮೂರನೇ ಚಿತ್ರವಿದು. 28ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ,” ಎಂದು ತಿಳಿಸಿದರು. ಅಲ್ಲದೆ, ಬಿಡುಗಡೆಗೂ ಮುನ್ನ ಶಿವಮೊಗ್ಗ, ಮಂಗಳೂರು ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ನಗರಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುವುದಾಗಿ ಹೇಳಿದರು.

ನಟಿ ಮೇಘನಾ ರಾಜ್ ಮಾತನಾಡಿ, “ಈ ಚಿತ್ರಕ್ಕೆ ಆಯ್ಕೆಯಾದ ಮೊದಲ ಕಲಾವಿದೆ ನಾನು. ರಂಗಭೂಮಿ ಹಿನ್ನೆಲೆಯಿರುವ ಅನುಭವಿ ನಟರೊಂದಿಗೆ ಅಭಿನಯಿಸಿದ್ದು ಕಲಿವಿನ ಜೊತೆಗೆ ಅಪಾರ ಖುಷಿ ನೀಡಿದೆ,” ಎಂದು ತಮ್ಮ ಅನುಭವ ಹಂಚಿಕೊಂಡರು. ಇನ್ನೊಬ್ಬ ನಿರ್ದೇಶಕ ವಿನಯ್ ಪ್ರೀತಮ್ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.

ಸಮಾರಂಭದಲ್ಲಿ ನಟರಾದ ಉಷಾ ಭಂಡಾರಿ, ಅಶ್ವ, ಗಾಯಕಿ ಅನುರಾಧ ಭಟ್, ಸಂಗೀತ ನಿರ್ದೇಶಕ ಪಂಚಮ್ ಜೀವ, ಹಿನ್ನೆಲೆ ಸಂಗೀತ ನೀಡಿದ ಶ್ರೀಧರ್ ವಿ. ಸಂಭ್ರಮ್ ಹಾಗೂ ವಿತರಕ ರಮೇಶ್ ಬಾಬು ಉಪಸ್ಥಿತರಿದ್ದರು.

- Advertisement -

Latest News

error: Content is protected !!