ಬೆಳ್ತಂಗಡಿ: ಲಾಯಿಲ ಹಾಗೂ ಉಜಿರೆ ಗ್ರಾಮ ಪಂಚಾಯತ್ ಗಳಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಕಡತಗಳ ನಿರಂತರ ಪರಿಶೀಲನೆಯನ್ನು ಸೆ.9 ರಂದು ದಿನವಿಡೀ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪ್ರಸನ್ನ ಎಜುಕೇಶನ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮಾಲೀಕ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗಂಗಾಧರ ಗೌಡ ಎಂಬವರು ಅಕ್ರಮ ಕಟ್ಟಡ ಕಟ್ಟಿರುವ ಬಗ್ಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದು ಈ ಬಗ್ಗೆ ಗ್ರಾ. ಪಂ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.
ಗ್ರಾ.ಪಂನಲ್ಲಿ ಅಕ್ರಮ ಕಟ್ಟಡಗಳ ಬಗ್ಗೆ ಹಲವಾರು ಆರೋಪಗಳು ಇರುವ ಹಿನ್ನಲೆಯಲ್ಲಿ ಈ ಎಲ್ಲಾ ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಯಾವುದೇ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಲಾಯಿಲದ ಆಜಾದ್ ಬೀಡಿ ಎಂ/ಎಸ್ ಸುಂದರ್ ಲಾಲ್ ಮೂಲ್ ಚಂದ್ ಜೈನ್ ಟೊಬಾಕೋ ಪ್ರೈ.ಲಿ.ಕಂಪೆನಿಯ ಬಗ್ಗೆ ಕಡತಗಳನ್ನು ಪರಿಶೀಲನೆ ನಡೆಸಲಾಗಿರುವುದಾಗಿ ತಿಳಿದು ಬಂದಿದೆ.
ಅಲ್ಲದೆ ಗ್ರಾ.ಪಂ ನ ಇಬ್ಬರು ಸಿಬ್ಬಂದಿಗಳಾದ ಮೋಹನ್ ದೇವಾಡಿಗ ಮತ್ತು ವಾರಿಜ ಅವರ ಬಗ್ಗೆ ಒಂದು ಪಕ್ಷದ ಪರವಾಗಿ ಕರ್ತವ್ಯ ಮಾಡುವ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಅವರ ಕಾರ್ಯ ನಿರ್ವಹಣೆ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ ಸಂಜೆ 6 ಗಂಟೆಗೆ ಪರಿಶೀಲನೆ ಅಂತ್ಯ ಮಾಡಿ ವಾಪಸ್ ಹೋಗಿದ್ದಾರೆ.ಉಜಿರೆ ಗ್ರಾಮ ಪಂಚಾಯತಿನಲ್ಲಿಯೂ ಅಕ್ರಮ ಕಟ್ಟಡಗಳ ಬಗ್ಗೆ ದೂರುಗಳು ಬಂದಿರುವುದಾಗಿ ತಿಳಿದು ಬಂದಿದೆ. ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಅಕ್ರಮ ಕಟ್ಟಡಕ್ಕೆ ಪರವಾನಗಿ ನೀಡಿರುವ ಬಗ್ಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಉಜಿರೆ ಗ್ರಾ.ಪಂ ನ ಕಾರ್ಯನಿರ್ವಹಣೆಯ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಮಗ್ರವಾದ ಪರಿಶೀಲನೆಯನ್ನು ನಡೆಸಿ ಸಂಜೆ 6:45 ಕ್ಕೆ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.


