ಬೆಳ್ತಂಗಡಿ: ಉಜಿರೆ ಗ್ರಾಮ ಮತ್ತು ಲಾಯಿಲ ಗ್ರಾಮ ಪಂಚಾಯತ್ ಗೆ ಏಕ ಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸುತ್ತಿರುವ ಘಟನೆ ಸೆ.9 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಲಾಯಿಲ ಗ್ರಾಮ ಪಂಚಾಯತ್ ಗೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ 10:30 ಗಂಟೆ ವೇಳೆಗೆ ಬಂದು ಕಚೇರಿಯಲ್ಲಿರುವ ಎಲ್ಲಾ ಕಡತಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಕೇಂದ್ರ ಕಛೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ,ತನಿಖೆಯ ಮುಂದುವರಿದ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಲಾಯಿಲ ಗ್ರಾಮ ಪಂಚಾಯತ್ ಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಡಿವೈಎಸ್ ಪಿ ಹಾಲಮೂರ್ತಿ ನೇತೃತ್ವದಲ್ಲಿ ನಾಗರಾಜ್ ಸನಿಲ್, ಪ್ರಸನ್ನ, ಅಬ್ದುಲ್ ಜಲಲ್, ಸುದೀಪ್ ಅಧಿಕಾರಿಗಳು ಮತ್ತು ಉಜಿರೆ ಗ್ರಾಮ ಪಂಚಾಯತ್ ಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಇನ್ಸ್ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್ ಕುಮಾರ್, ಸೂರಜ್ ಕಾವು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮುಂದುವರಿಸಿದ್ದು. ಸಂಜೆ ತನಕ ಮುಂದುವರಿಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.


