ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪರ್ಯಾಯ ಸ್ವಾಗತ ಸಮಿತಿ ಮತ್ತು ಭಕ್ತಾಭಿಮಾನಿಗಳು ರಾಜಾಂಗಣದಲ್ಲಿ ‘ಯತಿಕುಲ ಚಕ್ರವರ್ತಿ ಬಿರುದು ನೀಡಿ ಅಭಿನಂದಿಸಿದರು.
ತಮ್ಮ ಕ್ರಾಂತಿಕಾರಕ ಚತುರ್ಥ ಪರ್ಯಾಯವನ್ನು ವೈಭವಯುತವಾಗಿ, ಯಶಸ್ವಿಯಾಗಿ ಸಮಾಪನಗೊಳಿಸುತ್ತಿರುವ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಈ ಬಿರುದನ್ನ ನೀಡಿ ಗೌರವಿಸಲಾಯಿತು. ಪರ್ಯಾಯಕ್ಕೆ ಸಂಪೂರ್ಣ ಸಹಕಾರ ನೀಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ “ಶ್ರೀ ಕೃಷ್ಣಪ್ರಿಯಕೃತಂ ” ಪ್ರಶಸ್ತಿಯನ್ನು ಅಭಿನಂದನಾಪೂರ್ವಕವಾಗಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀಗಳು ಕೃಷ್ಣನ ಉತ್ಸವಮೂರ್ತಿಗೆ ಭಗವದ್ಗೀತೆ ಗ್ರಂಥಗಳಿಂದ ತುಲಾಭಾರ ನಡೆಸಿದರು. ಹಾಗೆಯೇ, ಭಕ್ತರು ಪುತ್ತಿಗೆ ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ನಡೆಸಿದರು. ಈ ಸಂದರ್ಭದಲ್ಲಿ ಸಂದೇಶ ನೀಡಿದ ಪುತ್ತಿಗೆ ಶ್ರೀಗಳು, ತಮ್ಮ ಪರ್ಯಾಯ ಯಶಸ್ವಿಯಾಗಿದ್ದರೆ ಅದನ್ನು ಕೃಷ್ಣನೇ ನಡೆಸಿದ್ದು, ತಾವು ನಿಮಿತ್ತ ಮಾತ್ರ. ಆದ್ದರಿಂದ ಅದರ ಶ್ರೇಯಸ್ಸಿಗೆ ತಾವು ಸನ್ಮಾನ ಪಡೆದರೇ ಶಾಸ್ತ್ರೀಯವಾಗಿ ತಪ್ಪಾಗುತ್ತದೆ, ಆದ್ದರಿಂದ ಮೊದಲು ಕೃಷ್ಣನಿಗೆ ಗೀತೆಯಿಂದಲೇ ತುಲಾಭಾರ ಮಾಡಿಸಿ, ಅಭಿವಂದಿಸುತಿದ್ದೇವೆ ಎಂದರು.


