Wednesday, June 26, 2024
Homeತಾಜಾ ಸುದ್ದಿಭಾರತದ ಮೊದಲ ಸ್ಪೀಡ್ ಆರ್ಟಿಸ್ಟ್: ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಉಜಿರೆ

ಭಾರತದ ಮೊದಲ ಸ್ಪೀಡ್ ಆರ್ಟಿಸ್ಟ್: ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಉಜಿರೆ

spot_img
- Advertisement -
- Advertisement -

ವಿಶೇಷ ಲೇಖನ : ಸಿಯಾ ಸಂತೋಷ್ ನಾಯಕ್
ರಾಜೇಂದ್ರ ಭಟ್ ಕೆ.

ತುಂಬಿದ ಸಭಾಂಗಣದಲ್ಲಿ ಸಾವಿರಾರು ಪ್ರೇಕ್ಷಕರು ತುಂಬಾ ಕುತೂಹಲದಿಂದ ಎತ್ತರದ ವೇದಿಕೆಯ ಕಡೆಗೆ ದೃಷ್ಟಿ ನೆಟ್ಟು ಕೂತಿದ್ದರು. ಜಗಮಗಿಸುವ ಬೆಳಕಿನ ಚಿತ್ತಾರ. ಮಧ್ಯದಲ್ಲಿ ಐದು ಅಡಿ ಎತ್ತರದ ಒಂದು ಕ್ಯಾನ್ವಾಸ್. ಅದರ ಎದುರು ಎಡಬದಿಯ ಒಂದು  ಕುರ್ಚಿಯಲ್ಲಿ ಎಪಿಜೆ ಅಬ್ದುಲ್ ಕಲಾಂ ಸರ್ ಕೂಲ್ ಆಗಿ ಕುಳಿತಿದ್ದರು. ಮಧುರವಾದ ಹಿನ್ನೆಲೆ ಸಂಗೀತ ಆರಂಭ ಆದ ಕೂಡಲೇ ಒಬ್ಬ 26-27 ವರ್ಷದ ಕಲಾಕಾರ ತನ್ನ ಎರಡೂ ಕೈಗಳಲ್ಲಿ ಬ್ರಷ್ ಹಿಡಿದು  ಬಣ್ಣಗಳಲ್ಲಿ ಮುಳುಗಿಸಿ ಕ್ಯಾನ್ವಾಸ್ ಮೇಲೆ ಬಣ್ಣಗಳನ್ನು ಎರಚುತ್ತ ಹೊಸ ವಿನ್ಯಾಸಗಳನ್ನು ರಚಿಸುತ್ತಾ  ಹೋದರು. ಜನ ಉಸಿರು ಬಿಗಿ ಹಿಡಿದು, ಕಣ್ಣು ರೆಪ್ಪೆ ಕೂಡ ಮುಚ್ಚದೆ ಅವರ ಕೈ ಚಳಕವನ್ನು ನೋಡುತ್ತ ಕುಳಿತಿದ್ದರು. 180 ಸೆಕೆಂಡ್ಸ್ ಪೂರ್ತಿ ಆದಾಗ  ಮ್ಯೂಸಿಕ್ ನಿಂತಿತು. ಕ್ಯಾನ್ವಾಸ್ ಮೇಲೆ ಅದ್ಭುತವಾದ ಕಲಾಂ ಚಿತ್ರ ಬಣ್ಣದಲ್ಲಿ ಮೂಡಿ  ಬಂದಿತ್ತು! ಸಾವಿರ ಪ್ರೇಕ್ಷಕರು ಎದ್ದು ನಿಂತು ಓವೇಷನ್ ಕೊಟ್ಟದ್ದು, ಕಲಾಂ ಸರ್ ಹತ್ತಿರ ಬಂದು ಬೆನ್ನು ತಟ್ಟಿದ್ದು…!  ಈ ಕ್ಷಣಗಳಿಗೆ ಸಾಕ್ಷಿಯಾದ ಯುವ  ಕಲಾವಿದ ಭಾರತದ ಮೊದಲ  ಸ್ಪೀಡ್ ಆರ್ಟಿಸ್ಟ್, ಒನ್ ಅಂಡ್ ಓನ್ಲಿ ವಿಲಾಸ್ ನಾಯಕ್!.

ವಿಲಾಸ್ ನಾಯಕ್ ಹುಟ್ಟಿದ್ದು ಬೆಳ್ತಂಗಡಿಯಲ್ಲಿ. ಕಾರ್ಕಳದಲ್ಲಿ ಅವನ ಅಜ್ಜನ ಮನೆ (ದಿ. ಎಣ್ಣೆಹೊಳೆ  ಮಂಜಯ್ಯ ನಾಯಕ್). ಅವನ  ಕುಟುಂಬದಲ್ಲಿ ಬೇರೆ ಯಾರೂ ಕಲಾವಿದರು ಇರಲಿಲ್ಲ! ಹುಡುಗ  ತನ್ನ ಮೂರನೇ ವರ್ಷ  ಪ್ರಾಯದಲ್ಲಿ  ಚಿತ್ರ ಬರೆಯಲು ಆರಂಭ ಮಾಡಿದ್ದ. ಕಲೆ  ಅವನಿಗೆ ಹೇಗೆ ಒಲಿಯಿತು ಎಂದು ಹೇಳುವುದು ಕಷ್ಟ. ವಿಲಾಸ್ ಶಾಲೆಯ ಕಲಿಕೆಯಲ್ಲಿ ಕೂಡ ಬ್ರಿಲಿಯಂಟ್ ಹುಡುಗ. ಉಜಿರೆ SDM ಕಾಲೇಜಿನಲ್ಲಿ ಓದುವಾಗ ಮಂಗಳೂರು ವಿವಿಯಲ್ಲಿ ಬಿಎಯಲ್ಲಿ ಏಳನೇ  ರಾಂಕ್ ಪಡೆದ! ಮುಂದೆ ಮೈಸೂರಿನಲ್ಲಿ MSW ಪೂರ್ತಿ ಮಾಡಿ ಎರಡನೇ ರಾಂಕ್ ಗಳಿಸಿದ! ನಂತರ ಆರು  ವರ್ಷಗಳ ಕಾಲ ಶ್ರೇಷ್ಟವಾದ ಐಬಿಎಂ ಕಂಪೆನಿಯಲ್ಲಿ HR  ಹುದ್ದೆ ನಿರ್ವಹಣೆ ಮಾಡಿದ. ಕೈ ತುಂಬಾ ಸಂಬಳದ ಜೊತೆಗೆ ನೆಮ್ಮದಿಯ ಜೀವನ ಇತ್ತು. ಆಗ ಅವರ ಯೋಚನೆಯು ಹೀಗೆ ಸಾಗುತ್ತಿತ್ತು. ಅವರ ಮಾತಲ್ಲೆ ಕೇಳುತ್ತ ಹೋಗಿ.”ಕಲೆಯ ಬಗ್ಗೆ ತೀವ್ರವಾದ ಆಸಕ್ತಿ, ಮನೆಯಲ್ಲಿ ಪ್ರೋತ್ಸಾಹ ಇತ್ತು. ಬಾಲ್ಯದಲ್ಲಿ ತುಂಬಾ ಆರ್ಟ್ ವರ್ಕ್ ಮಾಡುತ್ತಿದ್ದೆ. ಪೈಂಟಿಂಗ್ ಮಾಡುತ್ತಿದ್ದೆ. ಬ್ಯಾನರ್ ಕೂಡ ಬರೆಯುತ್ತಿದ್ದೆ. ಕಲಾವಿದ ಆಗಬೇಕು ಅನ್ನುವ ತುಡಿತ. ಆದರೆ ಮನೆಯವರು ಕಲಿಕೆಯ ಮೇಲೆ ಫೋಕಸ್ ಮಾಡು, ಕಲೆಯನ್ನು ಕೇವಲ ಹವ್ಯಾಸವಾಗಿ ಇಟ್ಟುಕೋ ಅನ್ನುತ್ತಿದ್ದರು. ಬಿಡುವಿದ್ದಾಗ ಪೈಂಟಿಂಗ್ ಮಾಡುತ್ತ ಕುಳಿತು ಬಿಡುತ್ತಿದ್ದೆ. ಬಿ.ಕೆ.ಎಸ್ ವರ್ಮಾ ಅವರನ್ನು ಮಾನಸ ಗುರುವಾಗಿ ಸ್ವೀಕಾರ ಮಾಡಿದ್ದೆ. ಬೇರೆ ಯಾರೂ ಗುರುಗಳಿಲ್ಲ. ಕಲೆಯನ್ನು ನಾನು  ಸ್ವಂತವಾಗಿ ಕಲಿತವನು. ಇತರರು   ಮಾಡಿದ್ದಕ್ಕಿಂತ ಭಿನ್ನವಾಗಿ ಏನಾದರೂ ಮಾಡಬೇಕು ಎಂದು ಆಸೆ. ಆದರೆ ಏನು ಮಾಡಬೇಕು ಅಂತ ಮಾತ್ರ  ಗೊತ್ತಿರಲಿಲ್ಲ.” ಅವರ ಮಾತು ಮುಂದುವರೆಯಿತು.

” ಮುಂದೆ IBM ಕಂಪೆನಿಯಲ್ಲಿ HR ಹುದ್ದೆಯನ್ನು   ನಿಭಾಯಿಸುವ ಸಂದರ್ಭ. ಅಲ್ಲಿ ನನ್ನ ಕೆಲಸ ಏನೆಂದರೆ ಪ್ರತೀ ಒಬ್ಬ ಉದ್ಯೋಗಿಯ ಪ್ರತಿಭೆಗಳನ್ನು ಹುಡುಕಿ ಅವರಿಗೆ ಹೊಂದಿಕೆ ಆಗುವ ಕೆಲಸಗಳನ್ನು  ಹಂಚುವುದು. ಆಗ ನನ್ನ ಮನಸ್ಸಿನ ಅತೃಪ್ತಿಯು  ತೀವ್ರವಾಯಿತು. ನಾನು ಬೇರೆಯವರ ಪ್ರತಿಭೆಗಳನ್ನು ಗುರುತಿಸಿ ಹೊರತರುತ್ತಿದ್ದೆ. ಆದರೆ ನನ್ನ ಪ್ರತಿಭೆಯನ್ನು ಪೋಷಿಸಲು ನನಗೆ ಸಮಯ ಸಿಗುತ್ತಿರಲಿಲ್ಲ! ಛೇ! ಏನಾದರೂ ನನ್ನ ಒಳಗಿನ ಕಲೆ, ಕಲಾವಿದ ಸಾಯಬಾರದು. ಏನು  ಮಾಡೋಣ ಎಂಬ ಯೋಚನೆ  ಮುಂದುವರೆದಾಗ ಒಂದು ದಿನ ಝಗ್ ಎಂದು ಮನದಲ್ಲಿ ಬೆಳಕು ಮೂಡಿತ್ತು! ಭಾರತದಲ್ಲಿ ಸ್ಪೀಡ್ ಆರ್ಟಿಸ್ಟ್ ಯಾರೂ ಇರಲಿಲ್ಲ. ನಾನು ಮಾಡಬೇಕು ಎಂದು ನಿರ್ಧರಿಸಿದೆ”       2003ರ ಹೊತ್ತಿಗೆ ಅವರು ಸ್ಪೀಡ್ ಪೈಂಟಿಂಗ್ ಮಾಡಲು ಆರಂಭ ಮಾಡಿದರು. ಮೊದಲು ವೇದಿಕೆಯಲ್ಲಿ ಮಾಡುವ ಧೈರ್ಯ ಇರಲಿಲ್ಲ. ಆದರೆ ರಾತ್ರಿ ಹಗಲು ಬಣ್ಣ ಎರಚುವ ಕೆಲಸ ಮುಂದುವರೆಯಿತು. ಊಟ ತಿಂಡಿ ಮರೆತು ಹೋಯಿತು. ನಿದ್ದೆ ಹಾರಿ ಹೋಗಿತ್ತು! ಅವರ  ಮನಸ್ಸಿನಲ್ಲಿ ಮೂಡಿದ  ಒಂದೊಂದೇ ಚಿತ್ರಗಳು ಕ್ಯಾನ್ವಾಸ್ ಮೇಲೆ ಮೂಡುತ್ತ ಹೋದಂತೆ ವಿಲಾಸ್ ಸಂಭ್ರಮ ಪಡುತ್ತಿದ್ದರು. ವ್ಯಕ್ತಿ ಚಿತ್ರ, ನೇಚರ್ ಪೈಂಟಿಂಗ್, ಬಣ್ಣದ  ಸಾಂಸ್ಕೃತಿಕ ಚಿತ್ರಗಳು… ಎಲ್ಲದರಲ್ಲೂ ಪ್ರಾವೀಣ್ಯತೆ ಬಂದಿತು. ಆತ್ಮವಿಶ್ವಾಸವು ಹೆಚ್ಚಾಯಿತು.      


ವಿಲಾಸ್ ನಾಯಕ್ ಪ್ರತಿಭೆಯನ್ನು ಮೊದಲ ಬಾರಿ ಕರ್ನಾಟಕ ನೋಡಿದ್ದು ಸುವರ್ಣ ಟಿವಿ , ಸೂಪರ್ ಸ್ಟಾರ್ ಕರ್ನಾಟಕ ‘ ರಿಯಾಲಿಟಿ ಶೋನಲ್ಲಿ (2010). ಇಡೀ ಭಾರತ ನೋಡಿದ್ದು ಕಲರ್ಸ್ ಟಿವಿಯ ‘ ಇಂಡಿಯನ್  ಗಾಟ್ ಟ್ಯಾಲೆಂಟ್’ ರಿಯಾಲಿಟಿ  ಶೋನಲ್ಲಿ( ಸೀಸನ್ 3-2011)! ವೇದಿಕೆಯಲ್ಲಿ ಸಾಲು ಸಾಲಾಗಿ ಎರಡೂವರೆ ನಿಮಿಷ, ಮೂರು ನಿಮಿಷಗಳ ಅವಧಿಯಲ್ಲಿ ಅವರು ವರ್ಣ ಚಿತ್ರಗಳನ್ನು  ಪೂರ್ತಿ ಮಾಡುವುದನ್ನು ನೋಡಿ ಇಡೀ ಭಾರತ ವಿಸ್ಮಯ ಪಟ್ಟಿತು. ಅಂತಹ ಕಲೆ, ಕಲಾವಿದನನ್ನು ಭಾರತ ಹಿಂದೆ ಎಂದೂ ಕಂಡಿರಲಿಲ್ಲ! ಅವರು ಆ ಶೋದ ಫೈನಲಿಸ್ಟ್ ಆಗಿ ಸ್ಪರ್ಧೆಯನ್ನು ಮುಗಿಸಿದರು..

” ಈ ಸಂದರ್ಭದಲ್ಲಿ ನಾನು ಮತ್ತೆ ಯೋಚನೆ ಮಾಡಿದೆ.  ನಾನು ಕಾರ್ಪೊರೇಟ್ ಹುದ್ದೆಯನ್ನು ಇಟ್ಟುಕೊಂಡು ನನ್ನ ಕಲೆಯನ್ನು ಪೋಷಣೆ ಮಾಡಲು ಸಾಧ್ಯವೇ ಇರಲಿಲ್ಲ. ನಾನು ರಿಸ್ಕ್  ತೆಗೆದುಕೊಳ್ಳಲು ಸಿದ್ಧನಾದೆ. ಮನೆಯವರನ್ನು ಕೇಳಿದ್ದಕ್ಕೆ ‘ಗೊ ಅಹೆಡ್’ ಎಂದು ಹೇಳಿ ಪ್ರೋತ್ಸಾಹಿಸಿದರು.2011ರಲ್ಲಿ ನನ್ನ ಕಾರ್ಪೊರೇಟ್ ಹುದ್ದೆಗೆ ರಾಜೀನಾಮೆ ಕೊಟ್ಟು ಕಲೆಯ ಕ್ಷೇತ್ರಕ್ಕೆ ಇಳಿದು ಬಿಟ್ಟೆ! ನಂತರ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ!” ಎಂದು ವಿಲಾಸ್ ಹೇಳಿದರು. ಅದು ಅವರ ಜೀವನದ ಮೇಜರ್ ಟರ್ನಿಂಗ್  ಪಾಯಿಂಟ್ ಆಯಿತು.      ಮುಂದಿನ 9 ವರ್ಷಗಳ  ಅವಧಿಯಲ್ಲಿ ವಿಲಾಸ್ ಅಂತಹ 850ಕ್ಕಿಂತ ಅಧಿಕ ಸ್ಟೇಜ್  ಶೋಗಳನ್ನು ವಿಶ್ವದ  ಬೇರೆ ಬೇರೆ ರಾಷ್ಟ್ರಗಳಲ್ಲಿ ನೀಡಿದ್ದಾರೆ! 36ಕ್ಕಿಂತ ಅಧಿಕ ದೇಶಗಳ ಬಹು  ಮುಖ್ಯ ವೇದಿಕೆಗಳಲ್ಲಿ ಜನರು  ಮೂಕವಿಸ್ಮಿತರಾಗಿ ಅವರ ಕಲಾ ಪ್ರದರ್ಶನ ನೋಡಿ ಚಪ್ಪಾಳೆ ಸುರಿದಿದ್ದಾರೆ! ಅಮೆರಿಕ, ಯೂರೋಪಿನ ಹೆಚ್ಚಿನ ಎಲ್ಲಾ ದೇಶಗಳು, ಜರ್ಮನಿ, ಫ್ರಾನ್ಸ್, ಇಟೆಲಿ, ಪೋರ್ಚುಗಲ್, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಚೀನಾ, ಹಾಂಕಾಂಗ್, ಎಲ್ಲಾ ಗಲ್ಫ್ ರಾಷ್ಟ್ರಗಳು, ಸ್ವಿಜರ್ಲ್ಯಾಂಡ್, ಶ್ರೀಲಂಕಾ… ಈ ರಾಷ್ಟ್ರಗಳ ವೇದಿಕೆಗಳು ಅವರ ಪ್ರತಿಭೆಗೆ ಸಾಕ್ಷಿ ಆಗಿವೆ! ಯಾವುದೇ ದೇಶಕ್ಕೆ ಹೋದಾಗ ಅಲ್ಲಿಯ ಸಂಸ್ಕೃತಿಯನ್ನು ಅಧ್ಯಯನ ಮಾಡಿ ಚಿತ್ರಗಳನ್ನು  ಬರೆಯುವುದು ಅವರ ವಿಶೇಷತೆ! ಅದರ ಜೊತೆಗೆ ಭಾರತದ ಶ್ರೇಷ್ಟ ಸಂಸ್ಕೃತಿಯನ್ನು  ಪಸರಿಸಲು ಅವರು ಮರೆಯುವುದಿಲ್ಲ! ಕ್ಯಾನ್ವಾಸಿನಲ್ಲಿ ಉಲ್ಟಾ ಚಿತ್ರ ಬರೆದು ನಂತರ ಕ್ಯಾನ್ವಾಸ್ ನೇರ ಮಾಡಿದಾಗ ಚಿತ್ರ ಪೂರ್ಣ ಆಗುವುದು ಅವರ ಇನ್ನೊಂದು ವಿಶೇಷತೆ! ಚಿತ್ರಕ್ಕೆ ಭಾಷೆ ಇಲ್ಲದೆ ಇರುವುದರಿಂದ ಅವರಿಗೆ ಹೋದಲ್ಲೆಲ್ಲ ಬಹಳ ದೊಡ್ಡ ಗೌರವ, ಮಾನ್ಯತೆ ದೊರೆತಿವೆ.

ಅವರ ಸಾಧನೆಯ ಕೆಲವು ಎಸಳು ಮಾತ್ರ ಇಲ್ಲಿ ಉಲ್ಲೇಖ ಮಾಡುವುದು ನನಗೆ ಸಾಧ್ಯ ಆಗಿದೆ.

1) ನಾನು ಮೊದಲೇ ಹೇಳಿದ ಹಾಗೆ ಅಬ್ದುಲ್ ಕಲಾಂ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಫುಟ್ಬಾಲ್ ದಂತಕಥೆ ಪೀಲೆ, ಅಮಿತಾಬ್ ಬಚ್ಚನ್, ಸಲ್ಮಾನ್, ಸುಬ್ಬುಲಕ್ಷ್ಮಿ, ಶಾರುಖ್ ಖಾನ್, ಐಶ್ವರ್ಯ ರೈ, ಸಚಿನ್, ವಿರಾಟ್ ಕೊಹ್ಲಿ, ಅಮ್ಜಾದ ಖಾನ್, ನಾಗಾರ್ಜುನ, NTR, ಕನ್ನಡದ ಎಲ್ಲ ಸ್ಟಾರ್ ನಟರು, ಸಾಲು ಮರದ ತಿಮ್ಮಕ್ಕ, ರಾಹುಲ್ ದ್ರಾವಿಡ್ ಮೊದಲಾದ ಅನೇಕ  ಸೆಲೆಬ್ರಿಟಿಗಳು….ಅವರ ಪೈಂಟಿಂಗ್ ಮೂಲಕ ಮೂಡಿ ಬಂದಿದ್ದಾರೆ. ಎಲ್ಲವೂ ಮೂರು ನಿಮಿಷಗಳ ಜಾದೂ! 
2) ಅಮೆರಿಕಾದ ನೇಷನಲ್ ಬಾಸ್ಕೆಟ್ ಬಾಲ್ ಅಕಾಡೆಮಿ (NBA) ಏರ್ಪಡಿಸಿದ ಬಾಸ್ಕೆಟ್ ಬಾಲ್ ದಂತಕಥೆ ಟಿಮ್ ಡಂಕನ್ ಅವರ ವಿದಾಯ ಪಂದ್ಯದಲ್ಲಿ ಅವರದೇ ಚಿತ್ರ ಬಿಡಿಸಿದ್ದು! ಬೃಹತ್  ಸ್ಟೇಡಿಯಂನಲ್ಲಿ  ಸೇರಿದ್ದ ಲಕ್ಷ ಲಕ್ಷ ಜನ  ವಿಲಾಸ್ ಅವರಿಗೆ ಎದ್ದು ನಿಂತು ಒವೇಶನ್ ಕೊಟ್ಟಿದ್ದು ಅತ್ಯಂತ ಸ್ಮರಣೀಯ ಕ್ಷಣ! 
3)ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ವಿವಿಧ ದೇಶಗಳ ರಾಜತಾಂತ್ರಿಕ ಮುಖ್ಯಸ್ಥರ  ಮುಂದೆ ಶೋ ನೀಡಿದ್ದು! 
4) ದೇಶದ ಸೈನಿಕರ ಉಪಸ್ಥಿತಿಯಲ್ಲಿ ಹಲವು ಪ್ರದರ್ಶನ ನೀಡಿದ್ದು ವಿಶೇಷ!  ವಿಶೇಷವಾಗಿ ಲಡಾಕ್  ಕ್ಯಾಂಪಿನಲ್ಲಿ ಕಾರ್ಗಿಲ್ ಸೈನಿಕರ ಮುಂದೆ ಶೋ ನೀಡಿದ್ದು ಅತ್ಯಂತ ಹೃದಯಸ್ಪರ್ಶಿ ಅನುಭವ!  
5) ಪ್ರಧಾನಿ ಮೋದಿಜಿ ಅವರ ಸಮ್ಮುಖದಲ್ಲಿ, ಜಪಾನ್ ಪ್ರಧಾನಿಯವರ ಎದುರು  ವಾರಣಾಸಿಯಲ್ಲಿ ಚಿತ್ರವನ್ನು ಬರೆದದ್ದು!ಮೋದಿಜಿ ಅವರ ಮುಂದೆ ಈ ರೀತಿಯ ಮೂರು ಪ್ರದರ್ಶನಗಳನ್ನು ವಿಲಾಸ್ ಬೇರೆ ಬೇರೆ ವೇದಿಕೆಗಳಲ್ಲಿ ನೀಡಿದ್ದಾರೆ. ಶ್ಲಾಘನೆ ಪಡೆದಿದ್ದಾರೆ! 
6) ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭದ ವೇದಿಕೆಗಳಲ್ಲಿ ವಿಲಾಸ್ ನಾಯಕ್ ಪ್ರತಿಭೆ ಅನಾವರಣ ಆಗಿದೆ.
7) ಏಷಿಯನ್ ಗಾಟ್ ಟ್ಯಾಲೆಂಟ್ ಮತ್ತು ವರ್ಲ್ಡ್ ಗಾಟ್ ಟ್ಯಾಲೆಂಟ್ ಸ್ಪರ್ಧೆಗಳ  ವೇದಿಕೆಗಳಲ್ಲಿ ವಿಲಾಸ್ ಶೋ ನೀಡಿದ್ದಾರೆ.
8) ಅಮೃತಸರದ ‘ಹಾರ್ಟ್ ಆಫ್ ಏಷಿಯಾ’  ಸಮ್ಮೇಳನದ ವೇದಿಕೆಯಲ್ಲಿ ಅವರ ಪ್ರದರ್ಶನ ಜನಮನ ಗೆದ್ದಿದೆ. 
9) ಸಿಂಗಪೂರ್ ಅಧ್ಯಕ್ಷರ ಸ್ಟಾರ್ ಚಾರಿಟಿ ಶೋದಲ್ಲಿ ವಿಲಾಸ್ ಚಿತ್ರ ಬರೆದಿದ್ದಾರೆ! 
10) ಲಂಡನ್ ನಗರದಲ್ಲಿ ಏಷಿಯನ್ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಶೋ ನೀಡಿದ್ದಾರೆ.  
11) ಮುಂಬೈಯ ಪ್ರತಿಷ್ಠಿತ ವೇದಿಕೆಯಲ್ಲಿ ‘ಲಯನ್ಸ್ ಗೋಲ್ಡ್  ಅವಾರ್ಡ್’ ಗೆದ್ದಿದ್ದಾರೆ. ಅದೇ ರೀತಿ ಇಡೀ ಭಾರತದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯವರು ಅವರನ್ನು ‘ಮೋಸ್ಟ್  ಇನ್ನೋವೇಟಿವ್ ಆಕ್ಟ್ ‘  ಎಂಬ ಪ್ರಶಸ್ತಿಯೊಂದಿಗೆ  ಸನ್ಮಾನ ಮಾಡಿದ್ದಾರೆ! 
12) ವಿವಿಧ ಚಾರಿಟಿ ಸಂಸ್ಥೆಗಳಿಗೆ ತನ್ನ ಕಲೆಯ ಪ್ರದರ್ಶನಗಳ ಜೊತೆಗೆ 85 ಲಕ್ಷಕ್ಕೂ ಅಧಿಕ ನಿಧಿಯನ್ನು ಸಂಗ್ರಹ ಮಾಡಿಕೊಟ್ಟಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ, ಮಕ್ಕಳ  ವಿದ್ಯಾಭ್ಯಾಸ, ಭಿನ್ನ ಸಾಮರ್ಥ್ಯ ಮಕ್ಕಳ ಮನೋವಿಕಾಸಕ್ಕೆ ಸಹಕಾರ ನೀಡುವ ಸಂಸ್ಥೆಗಳಿಗೆ ನಿಧಿ ಸಂಗ್ರಹ ಕಾರ್ಯಕ್ರಮಗಳುನಡೆದಿವೆ! ಇದು ವಿಲಾಸ್ ಅವರ ಪ್ಯಾಶನ್ ಆಗಿದೆ.

ನೂರಾರು ಟಿವಿ ಶೋ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಷ್ಟ ಕಲೆಯ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಬಲವಾಗಿ ನಂಬಿರುವ ವಿಲಾಸ್ ತನ್ನನ್ನು’ ಶಾಂತಿ ಮತ್ತು ಸೌಹಾರ್ದತೆಯ ರಾಯಭಾರಿ’  ಎಂದು ಕರೆದುಕೊಳ್ಳುತ್ತಾರೆ.  “ನಾನು ಸಾಧನೆ ಮಾಡಿದ್ದು ಏನೂ ಇಲ್ಲ. ಇನ್ನು ತುಂಬಾ ಸಾಧನೆ ಮಾಡಲು ಬಾಕಿ ಇದೆ!” ಎಂದು ಹೇಳುವ ಅವರ ಕಲೆ, ವಿನಯ ಸಂಪತ್ತು, ಸಾಮಾಜಿಕ ಕಾಳಜಿ, ಸೌಜನ್ಯ, ಸಂಸ್ಕೃತಿಯ  ಪ್ರೀತಿ ಇವುಗಳೆಲ್ಲ ಅವರನ್ನು ಐಕಾನ್ ಆಗಿ ಮಾಡಿವೆ! ಆಲ್ ದ ಬೆಸ್ಟ್ ವಿಲಾಸ್. 

 

- Advertisement -
spot_img

Latest News

error: Content is protected !!