ಮೈಸೂರು: ಒಣಗಿದ ದಾಸವಾಳದ ಹೂ ನುಂಗಿ ಆರೂವರೆ ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದೆ. ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನ ಸುದರ್ಶನ್ ಹಾಗೂ ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯ್ ಗೌಡ ಮೃತಪಟ್ಟ ಮಗು.
ಕಂದಮ್ಮ ಆಟವಾಡುತ್ತಾ ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇರಿಸಲಾಗಿದ್ದ ಒಣಗಿದ ದಾಸವಾಳದ ಹೂವು ಮಗುವಿನ ಕೈಗೆ ಸಿಕ್ಕಿದೆ. ಮಗು ಆಟವಾಡುತ್ತಾ ಅದನ್ನು ಬಾಯಿಗೆ ಹಾಕಿಕೊಂಡ ಪರಿಣಾಮ, ಹೂವು ಗಂಟಲಿನಲ್ಲಿ ಸಿಲುಕಿಕೊಂಡಿದೆ.
ಇದರಿಂದಾಗಿ ಮಗುವಿಗೆ ತಕ್ಷಣವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪೋಷಕರು ಕೂಡಲೇ ಮಗುವನ್ನು ಗಮನಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಮಗು ಅಸುನೀಗಿದೆ. ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳದ ಹೂವು ಸಿಲುಕಿದ್ದರಿಂದ ಉಸಿರುಗಟ್ಟುವಿಕೆ ಉಂಟಾಗಿ ಮಗು ಸಾವನ್ನಪ್ಪಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


