ಶಿರೂರು: ಉಳವರೆ ಗ್ರಾಮದ ನಿವಾಸಿ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯು ಗುಡ್ಡ ಕುಸಿತ ದುರಂತದಲ್ಲಿ ನೀರುಪಾಲಾಗಿದ್ದು, ಅವರ ಮೃತದೇಹ ಮಂಗಳವಾರ ಬೆಳಗ್ಗೆ ಗಂಗಾವಳಿ ನದಿಯ ತೀರದಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಯಿತು. ಆದರೆ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ, ಸ್ಥಳೀಯ ಆಡಳಿತ, ಶಾಸಕರು ಯಾರೂ ಸ್ಥಳದಲ್ಲಿರಲಿಲ್ಲ. ಗ್ರಾಮದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮಹಿಳೆಯರು ಗಂಜಿ ಕೇಂದ್ರದಲ್ಲಿದ್ದಾರೆ. ಹೊರುವವರಿಲ್ಲದೆ ರಸ್ತೆಯೂ ಸರಿಯಿಲ್ಲದೇ ವೃದ್ಧೆಯ ಶವ ಆಂಬುಲೆನ್ಸ್ ನಲ್ಲಿ ಉಳಿದಿದ್ದು ಕೊಳೆತ ವಾಸನೆಯಿಂದಾಗಿ ಯಾರೂ ಹೊರಲು ಸಿದ್ಧರಿರಲಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ಮಂಗಳೂರಿನ ಪತ್ರಕರ್ತರು ಮೃತದೇಹವನ್ನು ಹೊತ್ತುಕೊಂಡು ಸಾಗಿ ಮನೆಯವರಿಗೆ ಒಪ್ಪಿಸಿ ಮುಂದಿನ ಅಂತಿಮ ಸಂಸ್ಕಾರ ನಡೆಸಲು ನೆರವಾಗಿ, ಮಾನವೀಯತೆಯನ್ನು ಮೆರೆದಿದ್ದಾರೆ.
ಇನ್ನು ನಿರಾಶ್ರಿತರು ಮತ್ತು ಘಟನೆಯಲ್ಲಿ ಸಂತ್ರಸ್ತರಾದವರಿಗೆ ಸಾಂತ್ವನ ನೀಡಲು ಮಂಗಳೂರಿನಿಂದ ತೆರಳಿದ್ದ ಪತ್ರಕರ್ತರ ಚಾರಣ ತಂಡದ ಸದಸ್ಯರಾದ ಮೋಹನ್ ಕುತ್ತಾರ್, ಶಶಿ ಬೆಳ್ಳಾಯರು, ಆರಿಫ್ ಯುಆರ್ ಕಲ್ಕಟ್ಟ, ಗಿರೀಶ್ ಮಳಲಿ, ಶಿವಶಂಕರ್ ಅವರು ಶವಸಂಸ್ಕಾರದಲ್ಲಿ ಸಹಕರಿಸಿದರು.