ಪುತ್ತೂರು; ಮಾಜಿ ಗ್ರಾ.ಪಂ. ಸದಸ್ಯ ಹಾಗೂ ಅವರ ತಾಯಿಯನ್ನು ಕಟ್ಟಿ ದರೋಡೆಕೋರರು ದರೋಡೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರಿನಲ್ಲಿ ನಡೆದಿದೆ. ಬಡಗನ್ನೂರು ಗ್ರಾ.ಪಂ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಎಂಬವರ ಮನೆಗೆ ನಿನ್ನೆ ಮಧ್ಯರಾತ್ರಿ ನುಗ್ಗಿದ ದರೋಡೆಕೋರರು ಅವರ ತಾಯಿ ಹಾಗೂ ಅವರನ್ನು ಕಟ್ಟಿ ಹಾಕಿ ಚಿನ್ನ ಹಾಗೂ ನಗದನ್ನು ದೋಚಿದ್ದಾರೆ.
ಬಡಗನ್ನೂರು ಗ್ರಾಮದ ತೋಟದ ಮನೆಯಲ್ಲಿ ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈ ಮಾತ್ರ ವಾಸವಿದ್ದು 7 ರಿಂದ 8 ಜನರಿದ್ದ ದರೋಡೆಕೋರರ ಗುಂಪು ಕೈಯಲ್ಲಿ ತಲವಾರು ಮತ್ತು ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ ಜೀವಬೆದರಿಕೆಯೊಡ್ಡಿ ತಾಯಿ ಮಗನನ್ನು ಕಂಬಕ್ಕೆ ಕಟ್ಟಿಹಾಕಿ ನಗದು ಮತ್ತು ಚಿನ್ನಾಭರಣ ದೋಚಿದೆ.
ಇನ್ನು ಗುರುತು ಸಿಗದಂತೆ ಮುಖವಾಡ ಧರಿಸಿ ಬಂದಿದ್ದ ದರೋಡೆಕೋರರ ಗುಂಪು, ಗುರುಪ್ರಸಾದ್ ರೈ ಯಾರನ್ನೂ ಸಂಪರ್ಕಿಸದಂತೆ ಅವರ ಮೊಬೈಲನ್ನು ನೀರಿಗೆ ಹಾಕಿದೆ ಎನ್ನಲಾಗಿದೆ. ಕೊನೆಗೂ ಗುರುಪ್ರಸಾದ್ ರೈ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು, ಬೆರಳಚ್ಚು ತಜ್ಞರು,ಶ್ವಾನದಳ, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.