Monday, April 29, 2024
Homeತಾಜಾ ಸುದ್ದಿಚಾರ್ಮಾಡಿಯಿಂದ ಗುರುವಾಯನಕೆರೆ ಸಂಚಾರ ಬಲು ದುಸ್ತರ: ಮಳೆ ನೀರು ಹರಿಯಲಾಗದೆ ನದಿಯಂತಾದ ರಸ್ತೆಗಳು

ಚಾರ್ಮಾಡಿಯಿಂದ ಗುರುವಾಯನಕೆರೆ ಸಂಚಾರ ಬಲು ದುಸ್ತರ: ಮಳೆ ನೀರು ಹರಿಯಲಾಗದೆ ನದಿಯಂತಾದ ರಸ್ತೆಗಳು

spot_img
- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ-ಗುರುವಾಯನಕೆರೆ ತನಕದ ರಸ್ತೆಯಲ್ಲಿ ಮಳೆಗಾಲದ ಚರಂಡಿ ಕಾಮಗಾರಿ ನಿರ್ವಹಣೆಯಾಗದ ಕಾರಣ ವಾಹನ ಸಂಚಾರ ದುಸ್ತರವಾಗಿದೆ.

ಅತೀ ಹೆಚ್ಚು ವಾಹನ ಸಂಚಾರವಿರುವ ಈ ರಸ್ತೆ ಅಗಲ ಕಿರಿದಾಗಿದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ವಾಹನ ದಟ್ಟಣೆ ಇರುತ್ತದೆ. ಶಿರಾಡಿ ಘಾಟಿ ರಸ್ತೆಯ ಪರಿಸ್ಥಿತಿ ತೀರಾ ಸಾಮಾನ್ಯವಾಗಿರುವ ಕಾರಣ ಬೆಂಗಳೂರು-ಹಾಸನ ಕಡೆ ಪ್ರಯಾಣಿಸುವವರು ಚಾರ್ಮಾಡಿ ಘಾಟ್‌ ಅವಲಂಬಿಸಿರುವುದು ಇದಕ್ಕೆ ಕಾರಣವಾಗಿದೆ. ವಾಹನ ದಟ್ಟಣೆ ಇರುವ ಈ ರಾಷ್ಟ್ರೀಯ ಹೆದ್ದಾರಿಯ ಮಳೆಗಾಲದ ನಿರ್ವಹಣೆ ಕಾಮಗಾರಿ ಸಮಯಕ್ಕೆ ಸರಿಯಾಗಿ ಆರಂಭವಾಗಿಲ್ಲ. ಈ ಬಾರಿ ಬೇಸಿಗೆ ಮಳೆ ಬೇಗನೆ ಸುರಿದಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬಹುದು ಎಂದು ವಾಹನ ಸವಾರರು ಅಭಿಪ್ರಾಯಪಟ್ಟಿದ್ದರು. ಆದರೆ ಜೂನ್‌ ಕೊನೆಗೊಳ್ಳುತ್ತಿದ್ದರೂ ಕಾಮಗಾರಿ ನಡೆದಿಲ್ಲ.

ಈ ಹೆದ್ದಾರಿಯ ಚಾರ್ಮಾಡಿಯಿಂದ ಗುರುವಾಯನಕೆರೆ ತನಕ ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗಳಲ್ಲಿ ಗಿಡಗಂಟಿಗಳು, ಹೂಳು, ತ್ಯಾಜ್ಯ ತುಂಬಿದೆ. ಇದು ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯುಂಟು ಮಾಡಿದ್ದು, ನೀರು ರಸ್ತೆ ಮೂಲಕವೇ ಹರಿದು ವಾಹನ ಸವಾರರು, ಪಾದಚಾರಿಗಳು, ಶಾಲಾ ಮಕ್ಕಳು ಬವಣೆ ಪಡುವಂತಾಗಿದೆ. ಕೆಲವು ಕಡೆ ಆಳೆತ್ತರದ ಗಿಡಗಂಟಿ ಬೆಳೆದಿದ್ದು, ಚರಂಡಿಗಳೇ ಮಾಯವಾಗಿದೆ. ಹೆದ್ದಾರಿಯಿಂದ ಸಂಪರ್ಕ ರಸ್ತೆ ನಿರ್ಮಿಸಿದವರು ಮೋರಿಗಳನ್ನು ಅಳವಡಿಸದೆ ಚರಂಡಿಗಳಿಗೆ ಮಣ್ಣು ತುಂಬಿರುವುದು ಕಂಡುಬಂದಿದೆ. ಮೋರಿಗಳು ತುಂಬಿದ್ದು, ತ್ಯಾಜ್ಯ ಸಹಿತ ಮಳೆ ನೀರು ರಸ್ತೆ ಸಮೀಪದ ಮನೆಗಳ ತನಕ ಬರುತ್ತಿದೆ. ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ಅಪಘಾತಗಳು ಉಂಟಾಗುತ್ತಿದೆ.

ಉಜಿರೆಯಲ್ಲಿ ಚರಂಡಿ ದುರಸ್ತಿ ಆರಂಭ: ತಾಲೂಕಿನ ಪ್ರಮುಖ ಪಟ್ಟಣವಾಗಿರುವ ಉಜಿರೆ ಕೆಳಗಿನ ಪೇಟೆಯಲ್ಲಿ ಮಳೆ ಸುರಿದಾಗ ಅತಿ ಹೆಚ್ಚಿನ ಸಮಸ್ಯೆ ಉಂಟುಮಾಡುತ್ತಿದೆ. ಮಳೆ ಬರುವಾಗ ಸುಮಾರು 500 ಮೀ. ಪ್ರದೇಶದಲ್ಲಿ ನೀರು ರಸ್ತೆಯಲ್ಲಿ ಹರಿದು ಸಮಸ್ಯೆ ನಿರ್ಮಾಣವಾಗುತ್ತಿದೆ. ಚಾರ್ಮಾಡಿ ರಸ್ತೆಯ ಸಂಪಿಗೆನಗರ ಕ್ರಾಸ್‌ ಬಳಿ, ಅನುಗ್ರಹ ಶಾಲೆಯ ಬಳಿ ಸೇರಿದಂತೆ ಹೆದ್ದಾರಿಯ ಅನೇಕ ಕಡೆ ಇದೇ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಪ್ರದೇಶಗಳಲ್ಲಿ ವಾಹನ ಸವಾರರು ಪರದಾಟ ನಡೆಸಿ ಸಂಚರಿಸುವುದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗುತ್ತದೆ.

ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ 33.1 ಕಿ.ಮೀ. ರಸ್ತೆ ಸುಮಾರು 718 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಯಾಗಲಿದ್ದು, ಪ್ರಧಾನಿ ಮೋದಿ ಇತ್ತೀಚೆಗೆ ಬೆಂಗಳೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಾಮಗಾರಿ ನವೆಂಬರ್‌ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ. ಈ ಸಂದರ್ಭ ರಸ್ತೆಗಳು ಅಭಿವೃದ್ಧಿ ಹೊಂದಲಿವೆ. ಆದರೆ ಅದುವರೆಗೆ ಸುಗಮ ಸಂಚಾರಕ್ಕಾಗಿ ಮಳೆಗಾಲದ ನಿರ್ವಹಣೆ ಕಾಮಗಾರಿ ನಡೆಸುವ ಅಗತ್ಯವಿದೆ.

- Advertisement -
spot_img

Latest News

error: Content is protected !!