ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ರಿಶಿ ಕಪೂರ್ ಇಂದು ಬೆಳಿಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 67 ವರ್ಷದ ರಿಶಿ ಕಪೂರ್ ಈ ಮೊದಲು ಅಮೆರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಭಾರತಕ್ಕೆ ಮರಳಿದ್ದರು. ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಸಾವನ್ನಪ್ಪಿದ್ದು, ಇಂದು ರಿಶಿ ಕಪೂರ್ ಸಾವಿಗೀಡಾಗಿರುವುದು ಬಾಲಿವುಡ್ ಚಿತ್ರರಂಗವನ್ನು ದಿಗ್ಬ್ರಮೆಗೊಳಿಸಿದೆ.
ರಿಶಿ ಕಪೂರ್ ಪತ್ನಿ ನೀತೂ ಕಪೂರ್, ಪುತ್ರ ರಣಬೀರ್ ಕಪೂರ್ ಹಾಗೂ ಪುತ್ರಿ ರಿದ್ದಿಮಾ ಕಪೂರ್ ಅವರನ್ನು ಅಗಲಿದ್ದು, ಪತ್ನಿ ಹಾಗೂ ಪುತ್ರ ಮುಂಬೈನಲ್ಲೇ ಇದ್ದಾರೆ. ದೆಹಲಿ ಮೂಲದ ಉದ್ಯಮಿಯನ್ನು ವಿವಾಹವಾಗಿರುವ ರಿದ್ದಿಮಾ ತಂದೆಯ ಅಂತಿಮ ದರ್ಶನಕ್ಕಾಗಿ ದೆಹಲಿಯಿಂದ ರಸ್ತೆ ಪ್ರಯಾಣದ ಮೂಲಕ ಕಾರಿನಲ್ಲಿ ಮುಂಬೈಗೆ ಆಗಮಿಸುತ್ತಿದ್ದಾರೆಂದು ತಿಳಿದುಬಂದಿದೆ.
ರಿಶಿ ಕಪೂರ್ ಅವರನ್ನು ಕಳೆದ ರಾತ್ರಿ ಆಸ್ಪತ್ರೆಗೆ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ರಿದ್ದಿಮಾ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಮಗೆ ಚಾರ್ಟರ್ಡ್ ವಿಮಾನದ ಮೂಲಕ ಮುಂಬೈಗೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದರೆನ್ನಲಾಗಿದೆ. ಆದರೆ ವಿಮಾನ ಸಂಚಾರಕ್ಕೆ ಅನುಮತಿಯನ್ನು ಗೃಹ ಸಚಿವ ಅಮಿತ್ ಷಾ ಅವರೇ ನೀಡಬೇಕೆಂದು ಪೊಲೀಸರು ತಿಳಿಸಿದಾಗ ಅಮಿತ್ ಷಾ ಸಂಪರ್ಕ ಸಾಧ್ಯವಾಗದ ಹಿನ್ನಲೆಯಲ್ಲಿ ರಿದ್ದಿಮಾ ಕಾರಿನಲ್ಲಿ ರಾತ್ರಿಯೇ ಹೊರಟಿದ್ದು, ಮುಂಬೈಗೆ ಆಗಮಿಸುತ್ತಿದ್ದಾರೆನ್ನಲಾಗಿದೆ.
ಸಾವು ಸಂಭವಿಸಿದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ತೆರಳಲು ಸಂಬಂಧಿಕರಿಗೆ ಅನುಮತಿ ನೀಡುವ ಅಧಿಕಾರ ಪೊಲೀಸ್ ಅಧಿಕಾರಿಗಳಿಗಿದ್ದು, ಹೀಗಾಗಿ ಈ ಅನುಮತಿ ಪಡೆದು ರಿದ್ದಿಮಾ ಆಗಮಿಸುತ್ತಿದ್ದಾರೆ. ದೆಹಲಿಯಿಂದ ಮುಂಬೈಗೆ ರಸ್ತೆ ಮೂಲಕ ಪ್ರಯಾಣಿಸಿದರೆ 18 ಗಂಟೆ ಬೇಕಾಗುತ್ತದೆ ಎಂದು ಹೇಳಲಾಗಿದೆ.