Monday, May 6, 2024
Homeತಾಜಾ ಸುದ್ದಿದೆಹಲಿ ಕರ್ನಾಟಕ ಭವನದ ಬಾಡಿಗೆ ಪೆಂಡಿಂಗ್..ಕಳೆದ 22 ವರ್ಷಗಳಿಂದ ಬಾಡಿಗೆ ಪಾವತಿಸದ ನಟ ಶಶಿಕುಮಾರ್

ದೆಹಲಿ ಕರ್ನಾಟಕ ಭವನದ ಬಾಡಿಗೆ ಪೆಂಡಿಂಗ್..ಕಳೆದ 22 ವರ್ಷಗಳಿಂದ ಬಾಡಿಗೆ ಪಾವತಿಸದ ನಟ ಶಶಿಕುಮಾರ್

spot_img
- Advertisement -
- Advertisement -

ನವದೆಹಲಿ: ಮಾಜಿ ಸಂಸದ, ಚಲನಚಿತ್ರ ನಟ ಶಶಿಕುಮಾರ್‌ ಹೊಸ ದಿಲ್ಲಿಯ ಕರ್ನಾಟಕ ಭವನಕ್ಕೆ ಪಾವತಿಸಬೇಕಿರುವ 3.72 ಲಕ್ಷ ರೂ. ಗಳನ್ನು ಭೂ ಕಂದಾಯವೆಂದು ಪರಿಗಣಿಸಿ ವಸೂಲಿ ಮಾಡುವಂತೆ ಸರ್ಕಾರ ಆದೇಶಿಸಿದೆ. ಕಳೆದ 22 ವರ್ಷಗಳಿಂದಲೂ ಶಶಿ ಕುಮಾರ್‌ ದೆಹಲಿ ಕರ್ನಾಟಕ ಭವನಕ್ಕೆ ಪಾವತಿಸಬೇಕಾದ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಆ ಬಾಕಿಯನ್ನು ಭೂ ಕಂದಾಯ ಎಂದು ಪರಿಗಣಿಸಿ ವಸೂಲಿ ಮಾಡಲು ಸರಕಾರ ಮುಂದಾಗಿದೆ.

ನಟ, ಸಂಸದರಾದರೂ ಹಿಂದೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶಶಿಕುಮಾರ್‌, ಈಗ ಕರ್ನಾಟಕ ಭವನದ ಬಾಕಿ ಮೊತ್ತವನ್ನು ಪಾವತಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಚಿತ್ರದುರ್ಗದಲ್ಲಿ ಶಶಿಕುಮಾರ್‌ ವಾಸವಿಲ್ಲದ ಹಾಗೂ ಅಲ್ಲಿ ಶಶಿಕುಮಾರ್‌ಗೆ ಸೇರಿದ ಯಾವುದೇ ಆಸ್ತಿ ಪಾಸ್ತಿ ಇಲ್ಲದ ಕಾರಣ ಬೆಂಗಳೂರಿನ ವಿಳಾಸ ಹುಡುಕಿ ಅಲ್ಲಿಂದಲೇ ಭೂ ಕಂದಾಯದ ರೂಪದಲ್ಲಿ ಬಾಕಿ ಮೊತ್ತ ವಸೂಲು ಮಾಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಏಪ್ರಿಲ್ 19ರಂದು ರಾಜ್ಯ ಶಿಷ್ಟಾಚಾರದ ಅಧೀನ ಕಾರ‍್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಅಥವಾ ಮೊಳಕಾಲ್ಮೂರು ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿರುವ ಶಶಿಕುಮಾರ್‌ಗೆ ಎರಡು ದಶಕದ ಹಿಂದೆ ಮಾಡಿಕೊಂಡ ಎಡವಟ್ಟು ಈಗ ಸಮಸ್ಯೆಯಾಗಿ ಪರಿಣಮಿಸಿದೆ. ಜನಪ್ರತಿನಿಧಿಯಾಗಿದ್ದ ಶಶಿಕುಮಾರ್‌ ಸುದೀರ್ಘ ಕಾಲದಿಂದ ಸರಕಾರಿ ಅತಿಥಿ ಗೃಹದ ಬಾಕಿ ಪಾವತಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಜತೆಗೆ ಶಶಿಕುಮಾರ್‌ ಸಂಸದರಾಗಿದ್ದ ಅವಧಿಯಲ್ಲಿ ಸರಕಾರ ವಸತಿ ಕಲ್ಪಿಸಿದ ನಂತರವೂ ಕರ್ನಾಟಕ ಭವನದಲ್ಲೇ ತಮ್ಮ ವಸತಿ ಮುಂದುವರಿಸಿದ ಆರೋಪವಿದೆ.

ಕರ್ನಾಟಕ ಭವನಕ್ಕೆ ಬರಬೇಕಿರುವ ಬಾಕಿ ಮೊತ್ತ ಪಾವತಿಸುವಂತೆ ಮಾಜಿ ಸಂಸದ, ನಟ ಶಶಿಕುಮಾರ್‌ಗೆ ಹಲವು ಬಾರಿ ಕೋರಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 3.72 ಲಕ್ಷ ರೂ.ಗಳನ್ನು ಭೂ ಕಂದಾಯ ಎಂದು ಪರಿಗಣಿಸಿ ಮಾಜಿ ಸಂಸದ ಶಶಿಕುಮಾರ್‌ ಅವರಿಂದ ವಸೂಲಿ ಮಾಡಲು ಸಂಬಂಧಿಸಿದ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲು ಕರ್ನಾಟಕ ಭವನದ ನಿವಾಸಿ ಆಯುಕ್ತರು ಕೋರಿದ್ದರು. ಚಿತ್ರದುರ್ಗ ಸಂಸದರಾಗಿದ್ದ ಶಶಿಕುಮಾರ್‌ ಅವರಿಂದ ಬಾಕಿ ವಸೂಲು ಮಾಡುವಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಸೂಚನೆ ಬಂದಿತ್ತು. ಆದರೆ, ಮಾಜಿ ಸಂಸದ ಶಶಿಕುಮಾರ್‌ಗೆ ಸೇರಿದ ಯಾವುದೇ ಚರ, ಸ್ಥಿರಾಸ್ತಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಇಲ್ಲ. ಶಶಿಕುಮಾರ್‌ ಚಿತ್ರದುರ್ಗದಲ್ಲಿ ವಾಸವೂ ಇಲ್ಲ. ಶಶಿಕುಮಾರ್‌ ಬೆಂಗಳೂರಿನಲ್ಲಿ ವಾಸವಾಗಿದ್ದು, ಅಲ್ಲಿಂದಲೇ ಬಾಕಿ ವಸೂಲಿ ಮಾಡಲು ಕ್ರಮ ಕೈಗೊಳ್ಳಬಹುದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಸವೇಶ್ವರ ನಗರದ ವಾರ್ಡ್‌ ನಂ.101ರಲ್ಲಿ ಪಿಐಡಿ ಸಂಖ್ಯೆ 18-3-284ರಂತೆ ಒಂದು ಮನೆ, ಒಂದು ಸ್ವಿಫ್ಟ್‌ ಕಾರು ಹೊಂದಿರುವುದನ್ನು ಪತ್ತೆ ಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ದಿಲ್ಲಿಯ ಕರ್ನಾಟಕ ಭವನಕ್ಕೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ 3.72 ಲಕ್ಷ ರೂ.ಗಳನ್ನು ಇದೇ ವಿಳಾಸದಿಂದ ಭೂ ಕಂದಾಯವೆಂದು ಪರಿಗಣಿಸಿ ಶಶಿಕುಮಾರ್‌ ಅವರಿಂದ ವಸೂಲು ಮಾಡುವಂತೆ ಆದೇಶ ಹೊರಡಿಸಲಾಗಿದೆ.

- Advertisement -
spot_img

Latest News

error: Content is protected !!