ಪುತ್ತೂರಿನಿಂದ ಹೆಬ್ರಿಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಬಸ್ ನಲ್ಲಿ ಹೆಬ್ಬಾವು ಬೆಚ್ಚನೆ ಪ್ರಯಾಣಿಸಿದ ಘಟನೆ ಮೂಡಬಿದರೆಯಲ್ಲಿ ಬೆಳಕಿಗೆ ಬಂದಿದೆ.
ಪುತ್ತೂರಿನಲ್ಲಿ ಮದುವೆ ಮುಗಿಸಿ ಬಾಡಿಗೆ ಪಡೆದಿದ್ದ ಖಾಸಗಿ ಬಸ್ಸಿನಲ್ಲಿ ಮದುಮಗ, ಮದುಮಗಳು ಮತ್ತು ಕುಟುಂಬದ ಸದಸ್ಯರು ಹೆಬ್ರಿ ಕಡೆಗೆ ಪ್ರಯಾಣಿಸುತ್ತಿದ್ದರು. ಬಸ್ ಮೂಡಬಿದಿರೆ ಹತ್ತಿರ ಬಂದಾಗ ಹೋಟೇಲ್ ಗೋಳಿಬಜೆ ಸೆಂಟರ್ ನಲ್ಲಿ ಚಹಾ ಕುಡಿಯುವುದಕ್ಕಾಗಿ ಬಸ್ಸನ್ನು ನಿಲ್ಲಿಸಿದ್ದರು. ಎಲ್ಲದೂ ಚಹಾ ಕುಡಿಯಲು ಹೋಟೆಲ್ ಕಡೆಗೆ ತೆರಳಿದ್ದಾರೆ. ಕೊನೆಯದಾಗಿ ಇಳಿದ ಬಸ್ಸಿನ ಚಾಲಕ ಬಸ್ಸನ್ನು ಪರೀಕ್ಷಿಸುತ್ತಿದ್ದಾಗ ಬೃಹತ್ ಗಾತ್ರದ ಹಾವೊಂದು ಬಸ್ಸಿನ ಇಂಜಿನ್ ಸಮೀಪ ಇರುವುದು ಪತ್ತೆಯಾಗಿದೆ. ಬಸ್ಸಿನಲ್ಲಿ ಹಾವೊಂದು ಇದ್ದ ಸುದ್ದಿ ಹಬ್ಬಿ ಸ್ಥಳದಲ್ಲಿ ಅನೇಕರು ಜಮಾಯಿಸಿದರು. ಸ್ಥಳೀಯರ ಸಹಕಾರದಿಂದ ಹಾವು ಹಿಡಿಯೋರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ದಿನೇಶ್ ಪಡುಕೊಣಾಜೆ ಮತ್ತು ತಂಡ ಪ್ರಯಾಸದಿಂದ ಬಸ್ಸಿನಲ್ಲಿ ಅಡಗಿದ್ದ ಭಾರಿ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿ ಹೊರ ತೆಗೆದು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಹಿಡಿದ ಬಳಿಕ ಮದುಮಗ, ಮದುಮಗಳು ಮತ್ತು ಕುಟುಂಬಸ್ಥರು ನಿಟ್ಟಿಸಿರು ಬಿಟ್ಟು ಹೆಬ್ರಿಯತ್ತ ಪ್ರಯಾಣ ಬೆಳೆಸಿದ್ದಾರೆ.


