ವಿಟ್ಲ: ಪ್ರಗತಿಪರ ಕೃಷಿಕ, ಸಂಶೋಧಕ, ಮೊಕ್ತೇಸರ ನಿಟಿಲೆ ಮಹಾಬಲೇಶ್ವರ ಭಟ್ ಅವರು ಫೆ.18ರಂದು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಿಟ್ಲಪಡ್ನೂರು ಗ್ರಾಮದ ಕೋಡಪದವು ನಿಟಿಲೆ ನಿವಾಸಿಯಾಗಿದ್ದ ಮಹಾಬಲೇಶ್ವರ ಭಟ್ ಅವರಿಗೆ 70 ವರ್ಷ ವಯಸ್ಸಾಗಿತ್ತು.
ಕೋಡಪದವು ಶ್ರೀ ವೀರಾಂಜನೇಯ ಕ್ಷೇತ್ರದ ಮೊಕ್ತೇಸರರಾಗಿದ್ದ ಅವರು ಕಾಳುಮೆಣಸು ಬಿಡಿಸುವ ಯಂತ್ರವನ್ನು ಸಂಶೋಧನೆ ಮಾಡಿದ್ದರು. 2007ರಲ್ಲಿ ಕಾಳುಮೆಣಸು ಆಯುವ ಯಂತ್ರ, 2012ರಲ್ಲಿ ಕೊಕ್ಕೋ ಬೀಜ ಪ್ರತ್ಯೇಕಿಸುವ ಯಂತ್ರ, 2013ರಲ್ಲಿ ಅಡಿಕೆ ಸುಲಿಯುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದರು.
ಕೇರಳ ಸರಕಾರದ ಖ್ಯಾತ ಕೃಷಿ ವಸ್ತುಪ್ರದರ್ಶನ ‘ವೈಗಾ’ಕ್ಕಾಗಿಯೇ ಇವರು ತಯಾರಿಸಿದ ಎಲ್ಲ ಯಂತ್ರೋಪಕರಣಗಳನ್ನು ಮಳಿಗೆ ಇಟ್ಟಿದ್ದರು. ಇವರಿಗೆ 2007ರಲ್ಲಿ ಕೃಷಿ ಪಂಡಿತ ಪ್ರಶಸ್ತಿ, 2012ರಲ್ಲಿ ಸಮೃದ್ಧಿ ಪ್ರಶಸ್ತಿ, 2015ರಲ್ಲಿ ದ.ಕ.ಜಿ.ಕಸಾಪ ಪ್ರಶಸ್ತಿ, 2018ರಲ್ಲಿ ಹವ್ಯಕ ರತ್ನ ಪ್ರಶಸ್ತಿ, 2019ರಲ್ಲಿ ಕ್ಯಾಂಪ್ಕೋ ಪ್ರಶಸ್ತಿ ಮತ್ತು ಹಲವು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.


