ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟ ಕರೆ ಬೆಂಗಳೂರಿನಲ್ಲಿ ಕರೆ ಕೊಟ್ಟರುವ ಮುಷ್ಕರದಿಂದಾಗಿ ಖಾಸಗಿ ಸಾರಿಗೆ ವಾಹನಗಳು ಇಂದು ರಸ್ತೆಗೆ ಇಳಿಯದೇ ರಾಜಧಾನಿಯಲ್ಲಿ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.
ಖಾಸಗಿ ಬಸ್, ಆಟೋ, ಕ್ಯಾಬ್ ಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು, ಆಪ್ ಆಧಾರಿತ ಸೇವೆ ನೀಡುವ ಓಲಾ ಮತ್ತು ಊಬರ್ ಕ್ಯಾಬ್ ಗಳು ಕೂಡಾ ಸಂಚಾರ ಸ್ಥಗಿತಗೊಳಿಸಿವೆ.
ಶಾಲಾ ವಾಹನಗಳು ಕೂಡಾ ಮುಷ್ಕರದಲ್ಲಿ ಭಾಗವಹಿಸಿರುವ ಕಾರಣ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಪೋಷಕರು ಕಷ್ಟಪಡುತ್ತಿದ್ದು ಕೆಲವು ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೂಡಾ ಪ್ರಯಾಣಿಕರು ಕಾಯುವಂತಾಗಿದೆ.
ಬೆಂಗಳೂರಿನಲ್ಲಿ ಇಂದು ಸುಮಾರು ಹತ್ತು ಲಕ್ಷದಷ್ಟು ಖಾಸಗಿ ಸಾರಿಗೆ ವಾಹನಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.
ಖಾಸಗಿ ಸಾರಿಗೆ ಮುಷ್ಕರಕ್ಕೆ ವಿಪಕ್ಷ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಬಿಎಂಟಿಸಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ.