ಮಂಗಳೂರು: ಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಆಯೋಜಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಅವರು ರವಿವಾರ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ದರ್ಶನ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕಚೇರಿಯ 2 ಮತ್ತು 3ನೇ ಮಹಡಿಯ ಕೊಠಡಿಗಳನ್ನು ಪರಿಶೀಲಿಸಿದ ಅವರು, ಮುಖ್ಯಮಂತ್ರಿಗಳು, ಸಚಿವರು ಮತ್ತು ಅಧಿಕಾರಿಗಳಿಗೆ ಅಗತ್ಯವಿರುವ ಕುರ್ಚಿ ಹಾಗೂ ಇತರ ವ್ಯವಸ್ಥೆಗಳ ಕುರಿತು ಮಾಹಿತಿ ಸಂಗ್ರಹಿಸಿದರು. ನಿಯಮಾವಳಿಗಳಂತೆ ಹಾಗೂ ಮುಖ್ಯಮಂತ್ರಿಗಳ ಆಶಯದಂತೆ ಸಭೆಯನ್ನು ಸರ್ಕಾರಿ ಕಚೇರಿಯಲ್ಲೇ ಆಯೋಜಿಸಲಾಗುತ್ತಿದ್ದು, ಸಭೆಯಲ್ಲಿ ಸಚಿವರ ಹೊರತಾಗಿ ಕೇವಲ ಐದು ಮಂದಿ ಮುಖ್ಯ ಅಧಿಕಾರಿಗಳಷ್ಟೇ ಉಪಸ್ಥಿತರಿರುತ್ತಾರೆ. ಉಳಿದ ಅಧಿಕಾರಿಗಳು ತಮ್ಮ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಮಾತ್ರ ಸಭೆಗೆ ಆಗಮಿಸಲಿದ್ದಾರೆ.
ಈ ಐತಿಹಾಸಿಕ ಸಭೆಯನ್ನು ಜಿಲ್ಲೆಗೆ ಗೌರವ ಬರುವ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಖಾದರ್ ತಿಳಿಸಿದರು. ಅಲ್ಲದೆ, ಸಂಪುಟ ಸಭೆಯಲ್ಲಿ ಮಂಡಿಸಬೇಕಾದ ಜಿಲ್ಲೆಯ ಪ್ರಮುಖ ಬೇಡಿಕೆಗಳು ಮತ್ತು ಪ್ರಸ್ತಾವನೆಗಳ ಕುರಿತು ಸ್ಥಳೀಯ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಚರ್ಚಿಸಿ ಸಲಹೆ ಪಡೆಯುವುದಾಗಿ ಹೇಳಿದರು. ಪರಿಶೀಲನೆಯ ವೇಳೆ ಎಡಿಸಿ ರಾಜು, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


