ಬೆಳ್ತಂಗಡಿ : ಉಜಿರೆ ಹಾಗೂ ಕಲ್ಮಂಜ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಸೆ.6 ರಂದು ಭಾನುವಾರ ಒಂಟಿ ಕಾಡಾನೆ ಸಂಚರಿಸಿ ಉಜಿರೆ ಗ್ರಾಮದ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನ ಸಮೀಪವೇ ಖಾಸಗಿ ಜಾಗದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಬೀಡು ಬಿಟ್ಟು ಜನರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಸೆ.6 ರಂದು ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಕಲ್ಮಂಜ ಗ್ರಾಮದ ಅಕ್ಷಯ ನಗರದ ಜನನಿಬಿಡ ಪ್ರದೇಶದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಆನೆಯನ್ನು ಕಂಡು ಆತಂಕಗೊಂಡ ಸ್ಥಳೀಯರು ಅದನ್ನು ಓಡಿಸಲು ಯತ್ನಿಸಿದರೂ, ಆನೆ ಅಲ್ಲಿಯೇ ಸುತ್ತಾಡುತ್ತಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆನೆಯನ್ನು ಕಾಡಿನತ್ತ ಅಟ್ಟಲು ಪ್ರಯತ್ನಿಸಿದರು.
ಈ ವೇಳೆ ಅರಣ್ಯ ಪ್ರದೇಶದ ಮೂಲಕ ಉಜಿರೆ ಭಾಗದತ್ತ ತೆರಳಿದ ಆನೆ ಅಜಿತ್ ನಗರ, ಎಂಜಿನಿಯರಿಂಗ್ ಕಾಲೇಜು ಪರಿಸರ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜು ಪಕ್ಕದಲ್ಲಿ ಠಿಕಾಣಿ ಹೂಡಿತು. ಜನನಿಬಿಡ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಕಾರ್ಯಾಚರಣೆ ನಡೆಸುವುದು ಅಪಾಯಕಾರಿ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಆನೆಯನ್ನು ಓಡಿಸುವ ಕಾರ್ಯ ಮಾಡದೆ ಸಿಬ್ಬಂದಿಯನ್ನು ಸ್ಥಳದಲ್ಲೇ ನಿಯೋಜಿಸಿ ಆನೆಯ ಚಲನವಲನದ ಮೇಲೆ ನಿಗಾ ಇರಿಸಿ ಆನೆ ಜನವಸತಿ ಪ್ರದೇಶಗಳತ್ತ ಹಾಗೂ ಉಜಿರೆ ನಗರದತ್ತ ನುಗ್ಗದಂತೆ ತಡೆಯುವ ಕಾರ್ಯಮಾಡಿದರು.ಸಂಜೆಯ ವೇಳೆ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ಕಾಡಿನತ್ತ ಅಟ್ಟುವ ಕಾರ್ಯಾಚರಣೆ ಮುಂದುವರಿಸಲಾಯಿತು.ಈವೇಳೆ ಕಾಡಾನೆ ಪೇಟೆ ಹಾಗೂ ಜನವಸತಿ ಪ್ರದೇಶದತ್ತ ನುಗ್ಗಲು ಪ್ರಯತ್ನಿಸಿದಾಗ ಆನೆ ಕಾರ್ಯ ಪಡೆ ಸಿಬ್ಬಂದಿ ಗುಂಡು ಹಾರಿಸಿ ಪಟಾಕಿಗಳನ್ನು ಒಡೆದು ಆನೆಯನ್ನು ಹಿಮ್ಮೆಟ್ಟಿಸಿದರು. ಸುಮಾರು 7.30 ರ ವರೆಗೆ ನಡೆದ ಕಾರ್ಯಾಚರಣೆಯ ಬಳಿಕ ಆನೆಯನ್ನು ಅರಣ್ಯದತ್ತ ಅಟ್ಟುವಲ್ಲಿ ಆನೆ ಕಾರ್ಯ ಪಡೆ ಯಶಸ್ವಿಯಾಗಿದೆ.
ಮಂಗಳೂರು ವಿಭಾಗದಿಂದ ಆನೆ ಕಾರ್ಯಪಡೆ: ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಗೆ ಮಂಗಳೂರು ಅರಣ್ಯ ವಿಭಾಗದಿಂದ ವಿಶೇಷ ಆನೆ ಕಾರ್ಯಪಡೆ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಬೆಳ್ತಂಗಡಿಯ ಡಿಆರ್ಎಫ್ಒಗಳಾದ ಕಮಲಾ, ರಂಜಿತ್, ದೀಪಾ, ರವಿಚಂದ್ರ ಹಾಗೂ ಸಿಬ್ಬಂದಿ ಪ್ರತಾಪ್, ರವಿ ಜಟ್ಟಿ ಮುಕ್ರಿ, ವೀರೇಶ್, ಗೋಪಾಲ್, ಮನೋಹರ, ವಿನಯಚಂದ್ರ, ಕಿಟ್ಟಣ್ಣ, ಅನಿಲ್ ಸೇರಿದಂತೆ ಸಿಬ್ಬಂದಿ ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸಿದರು.
ಕಾಡಾನೆ ಬೆಳಾಲು, ಮಾಚಾರು, ಪೆರ್ಲ, ನೀರಚಿಲುಮೆ ಭಾಗದ ಮೂಲಕ ಸಂಚರಿಸಿ ಕಲ್ಮಂಜದ ಅಕ್ಷಯನಗರದತ್ತ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಶಂಕಿಸಿದೆ. ಎರಡು ದಿನಗಳ ಹಿಂದೆ ಇದೇ ಕಾಡಾನೆ ಬೆಳಾಲು ಪರಿಸರದಲ್ಲಿ ಕಾಣಿಸಿಕೊಂಡಿತ್ತು.
ಧ್ವನಿವರ್ಧಕದ ಮೂಲಕ ಎಚ್ಚರಿಕೆ: ಕಾಡಾನೆ ಸಂಚಾರದ ಹಿನ್ನೆಲೆಯಲ್ಲಿ ಉಜಿರೆ ಪೇಟೆ, ಅಕ್ಷಯನಗರ, ಕಲ್ಮಂಜ, ಎಂಜಿನಿಯರಿಂಗ್ ಕಾಲೇಜು ಪರಿಸರ, ನೀರಚಿಲುಮೆ, ನಿಡಿಗಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆ ನೀಡುವ ಕಾರ್ಯವನ್ನು ಮಾಡಲಾಯಿತು. ರಾತ್ರಿ ವೇಳೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಹಾಗೂ ಕಾಡಾನೆ ಕಂಡುಬಂದಲ್ಲಿ ಅದನ್ನು ಹಿಂಬಾಲಿಸಿ ಓಡಿಸಲು ಪ್ರಯತ್ನಿಸದಂತೆ ಸೂಚಿಸಲಾಗಿದೆ.
ತಾಲೂಕಿನ ಕಲ್ಮಂಜ, ಬೆಳಾಲು, ಮುಂಡಾಜೆ, ಕಡಿರುದ್ಯಾವರ, ಚಿಬಿದ್ರೆ, ತೋಟತ್ತಾಡಿ, ಮಲವಂತಿಗೆ, ಮಿತ್ತಬಾಗಿಲು, ನೆರಿಯ, ಚಾರ್ಮಾಡಿ, ಬಂದಾರು, ಕನ್ಯಾಡಿ, ಇಂದಬೆಟ್ಟು, ಶಿಶಿಲ, ಶಿಬಾಜೆ, ನಿಡ್ಲೆ, ಹತ್ಯಡ್ಕ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಓಡಾಟ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಇದೀಗ ಉಜಿರೆಯಂತಹ ಜನನಿಬಿಡ ಪೇಟೆ ಪ್ರದೇಶದವರೆಗೂ ಕಾಡಾನೆ ಪ್ರವೇಶಿಸಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಂಪ್ ಆಕ್ಷನ್ ಗನ್ ನಿಂದ ಕಾಟ್ರಿಡ್ಜ್ ಗುಂಡು ಹಾರಾಟ: ಸಂಜೆ 5ಗಂಟೆ ವೇಳೆಗೆ ಕಾಡಾನೆ ಏಕಾ ಏಕಿ ಇಂಜಿನಿಯರಿಂಗ್ ಕಾಲೆಜು ಹಾಗೂ ಉಜಿರೆ ಪೇಟೆಯತ್ತ ನುಗ್ಗಿತ್ತು ಈ ವೇಳೆ ಆನೆಯನ್ನು ತಡೆಯಲು ಆನೆ ಕಾರ್ಯ ಪಡೆಯ ಸಿಬ್ಬಂದಿಯೊಬ್ಬರು ಕಾಡಾನೆಯನ್ನು ತಡೆಯಲು ಆನೆಯತ್ತ ಮೂರು ಬಾರಿ ಕ್ವಾಟ್ರಿಡ್ಜ್ ಗುಂಡು ಹಾರಿಸುವ ಮೂಲಕ ಆನೆಯನ್ನು ಹಿಮ್ಮೆಟ್ಟಿಸಿದರು. ಕ್ವಾಟ್ರಿಡ್ಜ್ ಗುಂಡು ಹಾರಾಟ ನಡೆಸುವುದರಿಂದ ಸಣ್ಣಗಾತ್ರದ ಗುಂಡುಗಳು ಪಾಯಿಂಟ್ ನಲ್ಲಿ ಹೋಗದೆ ಹರಡಿ ಹೋಗುತ್ತವೆ. ಜೋರಾದ ಶಬ್ದದೊಂದಿಗೆ ಒಡೆಯುವ ಈ ಗುಂಡುಗಳು ಆನೆಗೆ ತಗುಲಿದರು ಯಾವುದೇ ಗಾಯ ಉಂಟಾಗುವುದಿಲ್ಲ. ಇದು ಗರಿಷ್ಠ 10 ಮೀ. ದೂರದಿಂದ ಹಾರಿಸಿದಾಗ ಮಾತ್ರ ಸಣ್ಣ ಗಾತ್ರದ ಪ್ರಾಣಿಗಳು ಗಾಯಗೊಳ್ಳುತ್ತವೆ ಎಂದು ಇಲಾಖೆ ತಿಳಿಸಿದೆ.
ಕೊನೆಗೂ ಕಾಲೇಜು ಕಂಪೌಡ್ ನಿಂದ ಹೊರ ಬಂದ ಕಾಡಾನೆ: ಬೆಳಗ್ಗೆ ಕಾಲೇಜು ಕಾಂಪೌಂಡ್ ಒಳಗೆ ಸೇರಿಕೊಂಡ ಕಾಡಾನೆ ಕಟ್ಟಡಗಳ ಹಿಂಭಾಗದಲ್ಲಿ ಒಂದಿಷ್ಟು ಕಾಡು ಬೆಳೆದಿರುವ ಪ್ರದೇಶವಿದ್ದು ಇಲ್ಲಿ ಸೇರಿಕೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಕಾಡಿನ ಪ್ರದೇಶಕ್ಕೆ ತೆರಳದೆ ಪೇಟೆಯತ್ತ ನುಗ್ಗುತ್ತಿದ್ದ ಕಾಡಾನೆ ಕೊನೆಗೂ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆಯ ದಿನವಿಡೀ ನಡೆದ ಕಾರ್ಯಚರಣೆಯ ಬಳಿಕ 7.30 ರ ಸುಮಾರಿಗೆ ಅರಣ್ಯದತ್ತ ನುಗ್ಗಿತ್ತು. ಕಾಡಾನೆಯೇನಾದರೂ ಉಜಿರೆ ಪೇಟೆಯತ್ತ ನುಗ್ಗಿದರೆ ದೊಡ್ಡ ಅನಾಹುತವೇ ಸಂಭವಿಸಬಹುದಾಗಿತ್ತು ಆನೆ ಕಾರ್ಯಪಡೆಯ ಯಶಸ್ವಿ ಕಾರ್ಯಾಚರಣೆ ಅಪಾಯವನ್ನು ತಪ್ಪಿಸಿದೆ.
ಹಿರಿಯ ಅಧಿಕಾರಿಗಳಿಲ್ಲದೆ ನಡೆದ ಕಾರ್ಯಾಚರಣೆ: ಕಾಡಾನೆ ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿ ದಿನವಿಡೀ ತಂಗಿದ್ದರೂ ಬೆಳ್ತಂಗಡಿ ವಲಯ ಆರ್.ಎಫ್.ಓ ಮಹೇಶ್ ದೇವಾಡಿಗ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಯಾರೂ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯ ನೇತೃತ್ವ ವಹಿಸುವ ಕಾರ್ಯ ಮಾಡಿರಲಿಲ್ಲ ಕೇವಲ ಸಿಬ್ಬಂದಿಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಾಚರಣೆ ಮಾತ್ರ ಎಂದು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.


