ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಬಂಧಿಸಲಾಗಿದ್ದ 21 ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ಗಡೀಪಾರು ಮಾಡಲು ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ. ಕಳೆದ ವರ್ಷ ಇಬ್ಬರನ್ನು ಗಡೀಪಾರು ಮಾಡಲಾಗಿದ್ದರೆ, ಈ ಬಾರಿ ಒಟ್ಟು 21 ಮಂದಿಯನ್ನು ಆಗಸ್ಟ್ 23ರಂದು ಪೊಲೀಸ್ ಭದ್ರತೆಯೊಂದಿಗೆ ಕರೆದೊಯ್ಯಲಾಗುತ್ತಿದೆ.
ಜುಲೈ 9ರಂದು ಸುರತ್ಕಲ್‌ನ ನಿರ್ಮಾಣ ಹಂತದ ಕಟ್ಟಡದ ಮೇಲೆ ದಾಳಿ ಮಾಡಿದ್ದ ಪೊಲೀಸರು ಬಾಂಗ್ಲಾದೇಶದ ರಾಜ್‌ಶಾಹಿ ವಿಭಾಗದ ಗೋಆಗರಿ ತಾಲೂಕಿನ 8 ಮಂದಿಯನ್ನು ಬಂಧಿಸಿದ್ದರು. ತದನಂತರ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ಮತ್ತು ಕೆಪಿಟಿ ಬಳಿಯಿಂದ ನಾಲ್ವರು ಅಪ್ರಾಪ್ತರು ಸೇರಿದಂತೆ 11 ಮಂದಿ ಹಾಗೂ ಮೂಡುಬಿದಿರೆ ಮತ್ತು ಮೂಲ್ಕಿಯಲ್ಲಿ ತಲಾ ಒಬ್ಬೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಬಂಧಿತರ ಬಳಿ ಬಾಂಗ್ಲಾದೇಶದ ರಾಷ್ಟ್ರೀಯ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಕುಟುಂಬದ ದಾಖಲೆಗಳು ಪತ್ತೆಯಾಗಿದ್ದವು.
ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಆಗಸ್ಟ್ 23ರಂದು ಮಂಗಳೂರಿನಿಂದ ವಿಶೇಷ ಪೊಲೀಸ್ ಎಸ್ಕಾರ್ಟ್ ಮೂಲಕ ಬಂಧಿತರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಲಾಗುವುದು ಮತ್ತು ಆಗಸ್ಟ್ 26ರಂದು ಬಿಎಸ್‌ಎಫ್ ಅಧಿಕಾರಿಗಳು ಇವರನ್ನು ಅಧಿಕೃತವಾಗಿ ಗಡೀಪಾರು ಮಾಡಲಿದ್ದಾರೆ ಎಂದು ಸುದ್ದಿ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.


