ಬೆಳ್ತಂಗಡಿ: ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮೂಲಕ ಜ್ಞಾನ ಮತ್ತು ಚಿಂತನಾ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಶಾಲಾ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಾಲಯಗಳು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಸ್ಥಳಗಳಾಗದೆ, ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಕೇಂದ್ರಗಳಾಗಬೇಕು ಎಂದು ಆ.23 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮನವಿ ಮೇರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.
“ಮಕ್ಕಳ ಕೈಯಲ್ಲಿ ಉತ್ತಮ ಪುಸ್ತಕಗಳು ಇರಬೇಕು. ಪಠ್ಯಪುಸ್ತಕದ ಜ್ಞಾನದ ಜೊತೆಗೆ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪುಸ್ತಕಗಳನ್ನು ಓದುವ ಅವಕಾಶ ವಿದ್ಯಾರ್ಥಿಗಳಿಗೆ ದೊರೆಯಬೇಕು. ಓದುವ ಹವ್ಯಾಸವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಸಹಕಾರಿಯಾಗಿದೆ. ಪುಸ್ತಕ ಓದುವ ಮೂಲಕ ಮಕ್ಕಳು ಪ್ರಶ್ನಿಸುವ, ವಿಚಾರ ಮಾಡುವ ಮತ್ತು ತಮ್ಮದೇ ಆದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ” ಎಂದು ಡಾ. ಬಿಳಿಮಲೆ ಹೇಳಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವುದು ಅಗತ್ಯ. ಪ್ರತಿಯೊಂದು ಶಾಲೆಯಲ್ಲೂ ಉತ್ತಮ ಗ್ರಂಥಾಲಯವಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಪುಸ್ತಕಗಳು ಸುಲಭವಾಗಿ ಲಭ್ಯವಾಗಬೇಕು ಎಂಬುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯವಾಗಿದೆ ಎಂದು ಅವರು ತಿಳಿಸಿದರು.
“ಬೆಳ್ತಂಗಡಿ ತಾಲೂಕಿನ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳ ಅಗತ್ಯವಿದೆ ಎಂದು ರಕ್ಷಿತ್ ಶಿವರಾಂ ಅವರು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿಯೂ ಅಗತ್ಯವಿರುವ ಕಡೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಜ್ಞಾನವನ್ನು ಬೆಳೆಸುವಂತಹ ಕಾರ್ಯಕ್ರಮಗಳಿಗೆ ಪ್ರಾಧಿಕಾರದಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗುವುದು” ಎಂದು ಡಾ. ಪುರುಷೋತ್ತಮ ಬಿಳಿಮಲೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಕ್ಷಿತ್ ಶಿವರಾಂ ಅವರು ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಗ್ರಂಥಾಲಯಗಳು ಬಹಳ ಮುಖ್ಯವಾಗಿದ್ದು, ತಾಲೂಕಿನ ಶಾಲೆಗಳಿಗೆ ಪುಸ್ತಕಗಳನ್ನು ಒದಗಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ಪುಸ್ತಕಗಳನ್ನು ಒದಗಿಸಿರುವ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ಟಣ ಉಪಸ್ಥಿತರಿದ್ದರು.


