ಮಂಗಳೂರು: ಮುನ್ಸೂಚನೆ ನೀಡದೆ HPCL ಸಂಸ್ಥೆಯ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಮಹಿಳಾ ಗುತ್ತಿಗೆ ಕಾರ್ಮಿಕರು ಕಳೆದ ಒಂದು ತಿಂಗಳು ಏಳು ದಿನಗಳಿಂದ ಕೆಲಸದ ಅವಧಿಯಲ್ಲಿ ಕಂಪನಿಯ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದಂತೆ ಮನವಿ ಪತ್ರ ಸ್ವೀಕರಿಸಲು HPCL ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸುರತ್ಕಲ್ ನಾಗರಿಕ ಹೋರಾಟ ಸಮಿತಿಯು ಕಳೆದ ಒಂದು ವಾರದಿಂದ ಮಹಿಳಾ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡುತ್ತಿದೆ.
ಕಾರ್ಮಿಕರ ಸಮಸ್ಯೆಯನ್ನು ಏಳು ದಿನಗಳೊಳಗೆ ಬಗೆಹರಿಸಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.
ಸುಮಾರು ಮೂರೂವರೆ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಕಾರ್ಮಿಕರು ಪ್ರಯತ್ನಿಸಿದರು. ಬಳಿಕ ಸುರತ್ಕಲ್ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸರ ಮಧ್ಯಸ್ಥಿಕೆಯ ನಂತರ HPCL ಅಧಿಕಾರಿಗಳು ಕಾರ್ಮಿಕರ ಮನವಿ ಪತ್ರವನ್ನು ಸ್ವೀಕರಿಸಿದರು.


