ಉಡುಪಿ: ಕೆಂಜೂರು ಗ್ರಾಮದ ಬಲ್ಲೆಬೈಲು ಎಂಬಲ್ಲಿ ಮನೋರಂಜನೆಗಾಗಿ ಕೋಳಿಗಳ ಕಾಲಿಗೆ ಹಿಂಸಾತ್ಮಕವಾಗಿ ಕತ್ತಿಯನ್ನು ಕಟ್ಟಿ ಜೂಜಾಟ ಆಡಿದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತರು ಕೆಂಜೂರು ಗ್ರಾಮದ ಬಾರಾಳಿಯ ಪ್ರವೀಣ್ ಶೆಟ್ಟಿ(39), ಚಗರಿಬೆಟ್ಟಿನ ರಾಘವೇಂದ್ರ(35) ಎಂದು ತಿಳಿದು ಬಂದಿದೆ.
ಕೆಂಜೂರು ಗ್ರಾಮದ ಬಲ್ಲೇಬೈಲು ಎಂಬಲ್ಲಿನ ಸರಕಾರಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾಗ ಸ್ಥಳಕ್ಕೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು ಇಬ್ಬರನ್ನು ಬಂಧಿಸಿ, ಆಟಕ್ಕಾಗಿ ಬಳಸಿದ 26,030ರೂ ಗಳನ್ನು ಹಾಗೂ ಸ್ಥಳದಲ್ಲಿ ಜೂಜಿಗೆ ಕಟ್ಟಿದ 2 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಕಾಲಿಗೆ ಕಟ್ಟಿದ 2 ನೈಲಾನ್ ಹಗ್ಗ ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸುತಿದ್ದಂತೆ ದಿನೇಶ ಶೆಟ್ಟಿ, ಸುಂದರ ಶೆಟ್ಟಿ, ಸತೀಶ್ ಶೆಟ್ಟಿ ಬಲ್ಲೇಬೈಲು, ನಾಗರಾಜ, ಪ್ರಭಾಕರ ಹಾಗೂ ಇತರರು ಓಡಿಹೋಗಿರುವುದಾಗಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


