ಪುತ್ತೂರು: ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ಫೋಟೋಗ್ರಾಫರ್ ಆಗಿರುವ ಜಗದೀಶ್ ಎಂಬವರು ಪುತ್ತೂರಿನಲ್ಲಿರುವ ತನ್ನ ಕೃಷಿ ಜಮೀನನ್ನು ನೋಡಲು ಬಂದು ಬಳಿಕ ಊರಿಗೆ ತೆರಳಿದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದಾರೆ ಎಂದು ಸಂಪ್ಯ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.
ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ಫೋಟೋಗ್ರಾಫರ್ ಆಗಿರುವ ಜಗದೀಶ್ ಅವರು ತನ್ನ ಪತ್ನಿ ಮಗನೊಂದಿಗೆ ಅಲ್ಲಿ ವಾಸವಾಗಿದ್ದರು. ತಿಂಗಳಿಗೊಮ್ಮೆ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರ್ ಪಂಜ ದಲ್ಲಿರುವ ಕೃಷಿ ಜಮೀನನ್ನು ನೋಡಲು ಬರುತ್ತಿದ್ದು, ನವೆಂಬರ್ 18ರಂದು ಬೆಳಗ್ಗೆ ಮೈಸೂರಿನಿಂದ ಪುತ್ತೂರು ಕುಂಜೂರು ಪಂಜದ ಕೃಷಿ ಜಮೀನಿಗೆ ಬಂದಿದ್ದರು. ಅವರು ಊರಿಗೆ ಹೋಗಿ ಅಲ್ಲಿಂದ ಮೈಸೂರಿಗೆ ಹೋಗಲೆಂದು ಓಮ್ನಿ ಕಾರಿನಲ್ಲಿ ಸುಳ್ಯ ತನಕ ತೆರಳಿದ್ದರು. ಅಲ್ಲಿಂದ ಬಸ್ನಲ್ಲಿ ಮೈಸೂರಿಗೆ ಹೋಗುವುದಾಗಿ ತೆರಳಿದ್ದರು, ಆದರೆ ಅವರು ಮೈಸೂರಿಗೆ ತಲುಪದೆ ನಾಪತ್ತೆಯಾಗಿದ್ದಾರೆ.
ಅವರ ಪತ್ನಿ ಶರ್ಮಿಳಾ ಅವರು ನವೆಂಬರ್ 19ರಂದು ಗಂಡ ಜಗದೀಶ್ ಅವರಿಗೆ ಕರೆ ಮಾಡಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ನಿಟ್ಟಿನಲ್ಲಿ ಅವರು ಮನೆಯವರಿಗೆ ಗಂಡ ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು. ಜಗದೀಶ್ ಅವರ ಸಹೋದರ ಮಂಗಳೂರಿನಲ್ಲಿರುವ ಶಶಿಧರ್ ಎಂಬವರು ಪುತ್ತೂರು ಸಂಪ್ಯ ಪೊಲೀಸರಿಗೆ ಜಗದೀಶ್ ಅವರು ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


