ಬೆಂಗಳೂರು : ನಟ ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಅಗಲಿ ಸುಮಾರು 20 ದಿನಗಳಾಗುತ್ತಾ ಬಂತು. ಚಿರು ಇನ್ನಿಲ್ಲ ಅನ್ನುವ ಸತ್ಯವನ್ನು ಇನ್ನೂ ಕೂಡ ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ಈಗಲೂ ಕೂಡ ಅವರ ಅಭಿಮಾನಿಗಳು ಚಿರಂಜೀವಿ ಸರ್ಜಾ ಅವರನ್ನು ನೆನೆದು ಕಣ್ಣೀರಿಡುತ್ತಲೇ ಇದ್ದಾರೆ. ಇನ್ನು ಚಿರು ಮನೆಯವರ ಕಷ್ಟವಂತೂ ಹೇಳ ತೀರದಾಗಿದೆ. ಪ್ರತಿದಿನ ಕೂಡ ಚಿರು ನೆನಪಲ್ಲೇ ಕಳೆಯುತ್ತಿದ್ದಾರೆ.

ಚಿರು ಸರ್ಜಾ ಇಲ್ಲದೇ ತನಗೆ ಇನ್ನೊಂದು ಬದುಕಿದೆ ಅಂತಾ ಕಲ್ಪನೆ ಕೂಡ ಮಾಡಿಕೊಂಡಿರದ ಮೇಘನಾ ರಾಜ್ ಅವರಂತೂ ಚಿರು ಇಲ್ಲ ಅನ್ನೋ ಸತ್ಯವನ್ನು ಒಪ್ಪಿಕೊಳ್ಳದಕ್ಕೇನೆ ತಯಾರಿಲ್ಲ. ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರು ಕಣ್ಣೀರಿಡುತ್ತಿದ್ದ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ದೃಶ್ಯಗಳನ್ನು ನೆನೆಪಿಸಿಕೊಂಡರೆ ಇವತ್ತಿಗೂ ಕರುಳು ಹಿಂಡಿ ಬರುತ್ತಿದೆ.

ಇನ್ನು ಚಿರು ಅಗಲಿಕೆಯ ಬಳಿಕ ಚಿರಂಜೀವಿ ಸರ್ಜಾ ಅವರ ನಿವಾಸಕ್ಕೆ ಸಾಕಷ್ಟು ತಾರೆಗಳು, ಗಣ್ಯರು ಬಂದು ಸಾಂತ್ವನ ಹೇಳುತ್ತಲೇ ಇದ್ದಾರೆ, ರಾಘವೇಂದ್ರ ರಾಜ್ ಕುಮಾರ್ ಅವರು ಇತ್ತೀಚೆಗೆ ಕುಟುಂಬ ಸಮೇತರಾಗಿ ಬಂದು ಚಿರು ಕುಟುಂಬ ಹಾಗೂ ಮೇಘನಾ ರಾಜ್ ಅವರಿಗೆ ಸಾಂತ್ವನ ಹೇಳಿದ್ದರು. ಇದೀಗ ಮತ್ತೊಬ್ಬ ನಟ ಮೇಘನಾ ರಾಜ್ ಅವರನ್ನು ಭೇಟಿಯಾಗಿದ್ದಾರೆ.

ಯೆಸ್. ಅವರು ಬೇರಾರೂ ಅಲ್ಲ. ಒಳ್ಳೆ ಹುಡ್ಗ ಪ್ರಥಮ್. ಪ್ರಥಮ್ ಮೇಘನಾ ರಾಜ್ ಅವರನ್ನು ಭೇಟಿ ಆಗಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಅವರು ಪ್ರಥಮ್ ಗೆ ಸಾಥ್ ಕೊಟ್ಟಿದ್ದಾರೆ. ಈ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಪ್ರಥಮ ಈ ಭೇಟಿಗೆ ಯಾವುದೇ ಅರ್ಥ ಕಲ್ಪಿಸೋದು ಬೇಡ. ಮೇಘನಾ ರಾಜ್ ಅವರು ಆದಷ್ಟು ಬೇಗ ಈ ದುಃಖದಿಂದ ಹೊರಗೆ ಬರಲಿ. ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಅವರ ಭೇಟಿಯ ಬಗ್ಗೆ ಸುಖಾ ಸುಮ್ಮನೆ ಚರ್ಚೆಗಳು ಬೇಡ. ಮೇಘನಾ ರಾಜ್ ಅವರ ಅಕ್ಕನ ಜಾಗದಲ್ಲಿ ನಿಂತು ಅವರು ಮೇಘನಾಗೆ ಧೈರ್ಯ ತುಂಬಿದ್ದಾರೆ. ಮೇಘನಾ ಅವರ ಭಾವನೆಗಳನ್ನು ಗೌರವಿಸಿ, ಅವರಿಗೆ ನಾವೆಲ್ಲ ಸ್ವಚ್ಛ ಮನಸ್ಸಿಂದ ಹಾರೈಸೋಣ ಎಂದಿದ್ದಾರೆ.
