
ಮಂಗಳೂರು; ರಸ್ತೆ ಬದಿ ಸ್ಕೂಟಿ ನಿಲ್ಲಿಸಿ ರೈನ್ ಕೋಟ್ ಧರಿಸುತ್ತಿದ್ದಾಗ ಕಾರು ಡಿಕ್ಕಿಯಾಗಿ ಯುವತಿ ಸಾವನ್ನಪ್ಪಿರುವ ಘಟನೆ ಪಾವಂಜೆ ದೇವಸ್ಥಾನ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ.
ಬಂಗ್ರಕುಳೂರು ನಿವಾಸಿ ಶ್ರುತಿ ಆಚಾರ್ಯ (27) ಮೃತ ಯುವತಿ. ಶ್ರುತಿ ಅವರೊಂದಿಗಿದ್ದ ಅವರ ತಂದೆ ಗೋಪಾಲ್ ಆಚಾರ್ಯ (53) ಮತ್ತು ಪಕ್ಕದಲ್ಲಿದ್ದ ಕೈರುನ್ನಿಸಾ (52) ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈನಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರ್ ಶ್ರುತಿ, ಸುಮಾರು 15 ದಿನಗಳ ಹಿಂದೆ ನಿಧನರಾದ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಮನೆಗೆ ಮರಳಿದ್ದರು. ಅಪಘಾತ ನಡೆದ ದಿನ, ಅವರು ಕಿನ್ನಿಗೋಳಿಯಲ್ಲಿ ಬ್ಯಾಂಕ್‌ಗೆ ಭೇಟಿ ನೀಡಿ ತನ್ನ ತಂದೆಯೊಂದಿಗೆ ಹಿಂತಿರುಗುತ್ತಿದ್ದರು.
ಇದೇ ವೇಳೆ, ಘಟನ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಇನ್ನೊಂದು ಕಾರಿನ ಚಾಲಕ ಜನರು ಸೇರಿರುವುದನ್ನು ನೋಡುತ್ತ ಕಾರು ಚಲಾಯಿಸಿದ್ದರಿಂದ ಅದು ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತೊಂದು ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದು, ಆ ಸ್ಕೂಟರ್ ಚಾಲಕರಿಗೂ ತರಚಿದ ಗಾಯಗಳಾಗಿವೆ.


