Friday, May 10, 2024
Homeತಾಜಾ ಸುದ್ದಿ11 ಜನ ಮಕ್ಕಳಿಗೂ ಬೇಡವಾದ ತಾಯಿ; ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ಹೆತ್ತಮ್ಮ

11 ಜನ ಮಕ್ಕಳಿಗೂ ಬೇಡವಾದ ತಾಯಿ; ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ಹೆತ್ತಮ್ಮ

spot_img
- Advertisement -
- Advertisement -

ಹಾವೇರಿ:  11 ಜನ ಮಕ್ಕಳು, ಮೊಮ್ಮಕ್ಕಳಿದ್ದರೂ ಅವರ್ಯಾರು ವೃದ್ಧೆಯೊಬ್ಬರನ್ನು ನೋಡಿಕೊಳ್ಳಲು ತಯಾರಿಲ್ಲದ ಕಾರಣ ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

ಅಂದ್ಹಾಗೆ ಆ ವೃದ್ಧೆಯ ಹೆಸರು ಪುಟ್ಟವ್ವ ಕೊಟ್ಟೂರ. 75ನ ವರ್ಷ. ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ರಂಗನಾಥ ನಗರದ ನಿವಾಸಿ. ಪುಟ್ಟವ್ವಳಿಗೆ 7 ಜನ ಗಂಡು ಹಾಗೂ 4 ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೂ ಮದುವೆಯಾಗಿದ್ದು, ಅವರೆಲ್ಲರಿಗೂ 1-2 ಎಂಬಂತೆ ಮಕ್ಕಳಿದ್ದಾರೆ. ಪುಟ್ಟವ್ವಳ ಪತಿ ರಾಣೆಬೆನ್ನೂರು ನಗರದಲ್ಲಿ 7 ಮನೆಗಳು, ಸೈಟು ಮತ್ತು ಜಮೀನಿ ಮಾಡಿದ್ದಾರೆ. ತಾಲೂಕಿನ ಹುಲ್ಲತ್ತಿ ಗ್ರಾಮದ ಹದ್ದಿನಲ್ಲಿರೋ 28 ಎಕರೆ ಜಮೀನು ವ್ಯಾಜ್ಯದಲ್ಲಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆಯಂತೆ.

ಪುಟ್ಟವ್ವಳ ಪತಿ ಹನುಮಂತಪ್ಪ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಆದರೆ ಈಗಲೂ ಮನೆಗಳು, ಜಮೀನು ಸೇರಿದಂತೆ ಎಲ್ಲವೂ ಪುಟ್ಟವ್ವಳ ಪತಿ ಹನುಮಂತಪ್ಪನ ಹೆಸರಿನಲ್ಲೇ ಇವೆ. ಇಷ್ಟೆಲ್ಲಾ ಇದ್ದರೂ ಇಳಿ ವಯಸ್ಸಿನಲ್ಲಿರೋ ಹೆತ್ತ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಪುಟ್ಟವ್ವಳಿಗೆ ಹಲವು ವಯೋಸಹಜ ಕಾಯಿಲೆಗಳೂ ಇವೆ. ಗಂಡು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದರೂ ಯಾರೂ ಪುಟ್ಟವ್ವಳಿಗೆ ಒಂದು ಹೊತ್ತಿನ ಊಟ ಹಾಕುತ್ತಿಲ್ಲ. ಆರೋಗ್ಯ ಸಮಸ್ಯೆಯಾದಾಗ ಆಸ್ಪತ್ರೆಗೂ ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ನನಗೆ ಈ ಜೀವನ ಸಾಕಾಗಿದೆ. ದಯಾಮರಣ ಕೊಡಿ ಅಂತ ವೃದ್ಧೆ ಪುಟ್ಟವ್ವ ದಯಾಮರಣದ ಪತ್ರ ಹಿಡಿದುಕೊಂಡು ಜಿಲ್ಲಾಡಳಿತ ಭವನಕ್ಕೆ ಅಲೆಯುತ್ತಿದ್ದಾರೆ.

ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. 7 ಜನ ಗಂಡು ಮಕ್ಕಳ ಪೈಕಿ ಕಿರಿಯ ಮಗ ಗೋವಿಂದರಾಜ ಮಾತ್ರ ಪುಟ್ಟವ್ವಳಿಗೆ ಕೆಲವು ವರ್ಷಗಳ ಕಾಲ ನೋಡಿಕೊಂಡಿದ್ದರು. ಆದರೆ ಅವರ ಆರ್ಥಿಕ ಪರಿಸ್ಥಿತಿ ಪ್ರಸ್ತುತ ಸರಿ ಇಲ್ಲ. ಪತಿಯ ಹೆಸರಿನಲ್ಲಿರೋ ಆಸ್ತಿಗಳಲ್ಲಿ ಅಲ್ಪಸ್ವಲ್ಪ ಮಾರಾಟ ಮಾಡಿ ಜೀವನ ಸಾಗಿಸಬೇಕು ಎಂದರೆ ಗಂಡು ಮಕ್ಕಳು ಅದಕ್ಕೂ ಬಿಡುತ್ತಿಲ್ಲ. ಎರಡು ಹೊತ್ತಿನ ಊಟವನ್ನೂ ಹಾಕುತ್ತಿಲ್ಲ. ಹೀಗಾಗಿ 11 ಜನ ಮಕ್ಕಳಿದ್ರೂ ಅಕ್ಕಪಕ್ಕದ ಮನೆಯವರು, ಅವರಿವರು ಕೊಟ್ಟ ಊಟ ಮಾಡಿ ಬದುಕಬೇಕಾಗಿದೆ ಎಂದು ಪುಟ್ಟವ್ವ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಮಕ್ಕಳು ನೋಡಿಕೊಳ್ಳದೇ ಇರೋದನ್ನು ಕಂಡು ಜೀವನವೇ ಸಾಕು ಸಾಕು ಅನ್ನಿಸಿದೆ. ನನಗೆ ದಯಾಮರಣ ಕೊಡಿಸಿ ಅಂತ ವೃದ್ಧ ತಾಯಿ ಪುಟ್ಟವ್ವ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ. ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಬರೆದಿರೋ ಪತ್ರ ಹಿಡಿದು ಬಂದಿರೋ ವೃದ್ಧೆಯನ್ನು ಭೇಟಿಯಾಗಿ ಹಿರಿಯ ನಾಗಕರಿಕರ ಕಲ್ಯಾಣ ಇಲಾಖೆ ಅಧಿಕಾರಿ ಆಶು ನದಾಫ ಸಮಸ್ಯೆ ಆಲಿಸಿದ್ದಾರೆ. ಪುಟ್ಟವ್ವಳಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ. ಉಳಿದಂತೆ ಪುಟ್ಟವ್ವ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಉಳಿದುಕೊಳ್ಳಲು ವೃದ್ಧಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸೋದಾಗಿ ಹೇಳಿದ್ದಾರೆ. 

- Advertisement -
spot_img

Latest News

error: Content is protected !!