ಬೆಂಗಳೂರು: ಅಶ್ಲೀಲ ವಿಡಿಯೊ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದು, ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಬೆಂಗಳೂರಿನ 25ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ವಿಧಿಸಿದೆ.
ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಹಾಗೂ ಸುದ್ದಿಗಳನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಪ್ರಕಟಿಸದಂತೆ ಆದೇಶ ಹೊರಡಿಸಿದೆ. ಇನ್ನು ವೆಬ್‌ಸೈಟ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ ಎಲ್ಲ ಮಾನಹಾನಿಕರ ವೀಡಿಯೊಗಳು, ಆಡಿಯೊ ಕ್ಲಿಪ್‌ಗಳು, ಕರೆ ರೆಕಾರ್ಡಿಂಗ್‌ಗಳು, ದೃಶ್ಯಗಳು ಮತ್ತು ಪತ್ರಿಕಾ ವರದಿಗಳನ್ನು ತಕ್ಷಣವೇ ತೆಗೆದುಹಾಕಲು ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಜತೆಗೆ, ಪ್ರತಿವಾದಿಗಳಿಗೆ ತುರ್ತು ನೋಟಿಸ್ ಹಾಗೂ ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ.
ಈ ಆದೇಶವನ್ನ ನ್ಯಾಯಾಧೀಶ ಗೋಪಾಲ ಕೃಷ್ಣ ರೈ ಅವರು ಹೊರಡಿಸಿದ್ದು, ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಆರೋಪದಲ್ಲಿ ಸದ್ಯ ಸೇವೆಯಿಂದ ಅಮಾನತುಗೊಂಡಿರುವ ಡಿಜಿಪಿ ರಾಮಚಂದ್ರ ರಾವ್ ಸಲ್ಲಿಸಿದ್ದ ಅಸಲು ದಾವೆಯ ವಿಚಾರಣೆ ನಡೆಸಿದ ಬಳಿಕ ಈ ಆದೇಶ ಮಾಡಿದ್ದಾರೆ ಎನ್ನಲಾಗಿದೆ.


