ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ನಷ್ಟ ಮಾಡುವ ಜತೆಗೆ ದೇಶದ ಭದ್ರತೆಗೆ ಗಂಡಾಂತರ ತಂದಿಟ್ಟಿದ್ದ ಇಬ್ಬರು ಕೇರಳ ಮೂಲದ ಕಿರಾತಕರನ್ನು ಸಿಸಿಬಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತರಿಂದ 960 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಿಲಿಟರಿ ಅಧಿಕಾರಿಗಳು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರದ ಭಯೋತ್ಪಾದನಾ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ.
ಕೇರಳದ ಮಲ್ಲಪುರ ಮೂಲದ ಇಬ್ರಾಹಿಂ ಪುಲ್ಲಟ್ಟಿ ಹಾಗೂ ತಮಿಳುನಾಡಿನ ತಿರುಪ್ಪೂರ್ ಮೂಲದ ಗೌತಮ್ ಬಂಧಿತರು. ಇಬ್ಬರೂ ಎಚ್.ಎಸ್.ಆರ್. ಬಡಾವಣೆ ಹಾಗೂ ಬಿಟಿಎಂ ಬಡಾವಣೆ ಆರು ಟೆಲಿಫೋನ್ ಎಕ್ಸ್ ಚೇಂಜ್ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎಟಿಎಸ್ ಅಧಿಕಾರಿಗಳು 960 ಸಿಮ್ ಕಾರ್ಡ್ ವಶಪಡಿಸಿಕೊಳ್ಳುವ ಮೂಲಕ ಸಿಮ್ ಕಿಟ್ ಅಕ್ರಮ ಬಯಲಿಗೆ ಎಳೆದಿದ್ದಾರೆ.
ಬಿಟಿಎಂ ಬಡಾವಣೆ ಹಾಗೂ ಎಚ್‌ಎಸ್ ಆರ್ ಬಡಾವಣೆಯ ಆರು ಅನಧಿಕೃತ ಟೆಲಿಪೋನ್ ಎಕ್ಸ್ ಚೇಂಜ್ ಕೇಂದ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಮಿಲಿಟರಿ ಅಧಿಕಾರಿಗಳು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಸಿಸಿಬಿಯ ಪೊಲೀಸರ ಎಟಿಎಸ್ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಇಬ್ಬರೂ ಸಿಮ್ ಕಾರ್ಡ್ ಗಳನ್ನು ಬಳಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದರು.ಹತ್ತು ರೂಪಾಯಿ ಬೆಲೆಯ ಒಂದು ಕರೆಗೆ ಕೇವಲ ಹತ್ತು ಪೈಸೆಗೆ ಕನ್ವರ್ಟ್ ಮಾಡುತ್ತಿದ್ದರು. ಇದಕ್ಕಾಗಿ ಸುಮಾರು ಒಂದು ಸಾವಿರ ಸಿಮ್ ಕಾರ್ಡ್ ಗಳನ್ನು ಬಳಿಸಿದ್ದರು. ಖಚಿತ ಮಾಹಿತಿ ಮೇರೆಗೆ ಆರು ಅನಧಿಕೃತ ಟೆಲಿಪೋನ್ ಎಕ್ಸ್ ಚೇಂಜ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಮ್ ಕಿಟ್ ಅಕ್ರಮದಿಂದ ದೇಶಕ್ಕೆ ಭಾರೀ ಗಂಡಾಂತರ ಎದುರಾಗುತ್ತಿತ್ತು. ಆರೋಪಿಗಳನ್ನು ಬಂಧಿಸುವ ಮೂಲಕ ಬಹುದೊಡ್ಡ ಅನಾಹುತ ತಪ್ಪಿಸಿದಂತಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


