Thursday, November 5, 2026
Homeಕರಾವಳಿಮಂಗಳೂರುಮೂಡಬಿದರೆ; ರಸ್ತೆ ಗುಂಡಿ ನೆಪದಲ್ಲಿ ಹೆದ್ದಾರಿ ತಡೆ,ಪೊಲೀಸರನ್ನೇ ನಿಂದಿಸಿದ ವ್ಯಕ್ತಿಯ ಬಂಧನ

ಮೂಡಬಿದರೆ; ರಸ್ತೆ ಗುಂಡಿ ನೆಪದಲ್ಲಿ ಹೆದ್ದಾರಿ ತಡೆ,ಪೊಲೀಸರನ್ನೇ ನಿಂದಿಸಿದ ವ್ಯಕ್ತಿಯ ಬಂಧನ

- Advertisement -
- Advertisement -

ಮೂಡಬಿದಿರೆ:ರಸ್ತೆ ಗುಂಡಿ ಬಿದ್ದಿದೆ ಎಂಬ ನೆಪವೊಡ್ಡಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ವಾಹನವಿಟ್ಟು ಭಾರಿ ಸಂಚಾರ ದಟ್ಟಣೆ ಉಂಟುಮಾಡಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುಚ್ಚಮೊಗರು ನಿವಾಸಿ ಪ್ರಶಾಂತ್ ಅಲಿಯಾಸ್ ಪಚ್ಚು (35) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ನವೆಂಬರ್ 2 ರಂದು ಸಂಜೆ ಸುಮಾರು 6:30 ರ ವೇಳೆಗೆ ಮೂಡುಬಿದಿರೆ ಬಳಿಯ ಪ್ರಾಂತ್ಯ ಗ್ರಾಮದ ಮಹಾವೀರ ಕಾಲೇಜಿನ ಮಾರಿಗುಡಿ ಬಳಿ ಆರೋಪಿ ಪ್ರಶಾಂತ್ ತನ್ನ ಮೋಟಾರು ಸೈಕಲನ್ನು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿದ್ದನು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಬಲವಂತವಾಗಿ ತಡೆದ ಆತ, “ರಸ್ತೆಯಲ್ಲಿ ಉಂಟಾಗಿರುವ ಹೊಂಡ-ಗುಂಡಿಗಳನ್ನು ಮುಚ್ಚಲು ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಬರಬೇಕು. ತಕ್ಷಣವೇ ಡಾಮರೀಕರಣ ಮಾಡಬೇಕು, ಇಲ್ಲದಿದ್ದರೆ ಈ ರಸ್ತೆಯಲ್ಲಿ ಯಾವುದೇ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ” ಎಂದು ಉದ್ಧಟತನ ಪ್ರದರ್ಶಿಸಿದ್ದನು.

ಆರೋಪಿಯ ಈ ಕೃತ್ಯದಿಂದಾಗಿ ಮೂಡುಬಿದಿರೆಯಿಂದ ಬೆಳ್ತಂಗಡಿ ಕಡೆಗೆ ಹೋಗುವ ಪ್ರಮುಖ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ವಿಷಯ ತಿಳಿದು ಸ್ಥಳದಲ್ಲಿ ವಾಹನ ಸಂಚಾರ ಸುಗಮಗೊಳಿಸಲು ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆಯೂ ಆರೋಪಿ ದುರ್ವರ್ತನೆ ತೋರಿದ್ದಾನೆ. “ಮೂಡುಬಿದಿರೆಯ ಇನ್‌ಸ್ಪೆಕ್ಟರ್ ಎಲ್ಲಿಂದಲೋ ಘಟ್ಟದಿಂದ ಬಂದವನು, ಅವನ ಅಧಿಕಾರ ಇಲ್ಲಿ ನಡೆಯುವುದಿಲ್ಲ. ನಾನು ಇಲ್ಲೇ ಹುಟ್ಟಿ ಬೆಳೆದವನು” ಎಂದು ಸಾರ್ವಜನಿಕರ ಎದುರಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಇನ್‌ಸ್ಪೆಕ್ಟರ್ ಅವರನ್ನು ನಿಂದಿಸಿದ ಆರೋಪದ ಮೇಲೆ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಆರೋಪಿ ಪ್ರಶಾಂತ್‌ನನ್ನು ಬಂಧಿಸಿದ ಪೊಲೀಸರು, ಬಳಿಕ ಕಾನೂನು ಪ್ರಕ್ರಿಯೆ ನಡೆಸಿ ಬಿಡುಗಡೆ ಮಾಡಿದ್ದಾರೆ.

- Advertisement -

Latest News

error: Content is protected !!