ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪ್ರಸ್ತುತ ಸ್ಥಿತಿ, ಪ್ರಮುಖ ಸಾಧನೆಗಳು, ಸವಾಲುಗಳು, ನ್ಯೂನತೆಗಳು ಹಾಗೂ ಸುಧಾರಣೆಗಾಗಿ ಪ್ರಸ್ತಾಪಿಸಿರುವ ನಿರ್ದಿಷ್ಟ ಕ್ರಮಗಳನ್ನು ಒಳಗೊಂಡ ಸಮಗ್ರ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಎಲ್ಲಾ ವಿವಿಗಳ ಕುಲಪತಿಗಳಿಗೆ ರಾಜ್ಯಪಾಲೆ ಡಾ. ಸುಧಾ ಯಾದವ್ ಸೂಚನೆ ನೀಡಿದ್ದಾರೆ.
ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಅಧಿಕಾರಿಗಳ ಜೊತೆ ಬೆಂಗಳೂರಿನ ಲೋಕಭವನದಲ್ಲಿ ಇಂದು ಸಭೆ ನಡೆಸಿದ ರಾಜ್ಯಪಾಲರು,
ಪ್ರವೇಶಾತಿ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅಲ್ಲದೇ, ಪ್ರತಿ ವಿವಿ ತನ್ನ ಪ್ರಸ್ತುತ ಕಾರ್ಯನಿರ್ವಹಣೆಯ ಸಮಗ್ರ ಪರಿಶೀಲನೆ ನಡೆಸಿ, ಸುಧಾರಣೆ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಬೇಕು ಮತ್ತು ಎಲ್ಲಾ ಕುಲಪತಿಗಳು ಮತ್ತು ಉನ್ನತ ಶಿಕ್ಷಣ ಮಂಡಳಿ ಸಮನ್ವಯ ಮತ್ತು ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕು ಎಂದೂ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.
ವಿವಿಗಳ ಗುಣಮಟ್ಟ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆ ಬಲಪಡಿಸಬೇಕು, ಎನ್ ಇಪಿ/ಎಸ್ಇಪಿಯ ಪರಿಣಾಮಕಾರಿ ಅನುಷ್ಠಾನ, ಕೈಗಾರಿಕೆಗಳು ಮತ್ತು ವಿವಿಗಳ ನಡುವಿನ ಸಮನ್ವಯ ಹಾಗೂ ಕೌಶಲ್ಯ ಅಭಿವೃದ್ಧಿ, ಸಂಶೋಧನೆ, ನಾವೀನ್ಯತೆ ಮತ್ತು ಉದ್ಯೋಗಾರ್ಹತೆಗೆ ಆದ್ಯತೆ ನೀಡಬೇಕು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ರಾಜ್ಯಪಾಲರು ಸಭೆಯಲ್ಲಿ ಸೂಚನೆ ನೀಡಿದ್ದಾರೆ.


