Wednesday, November 4, 2026
Homeಅಪರಾಧಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: 10 ಆರೋಪಿಗಳ ಬಂಧನ; KCOCA ಕಾಯ್ದೆಯಡಿ ತನಿಖೆಗೆ ಅನುಮತಿ!

ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: 10 ಆರೋಪಿಗಳ ಬಂಧನ; KCOCA ಕಾಯ್ದೆಯಡಿ ತನಿಖೆಗೆ ಅನುಮತಿ!

- Advertisement -
- Advertisement -

ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಸಂಘಟಿತ ಅಪರಾಧದ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ದೊರೆತಿದೆ.

ಆಗಸ್ಟ್ 7ರಂದು ಮಧ್ಯಾಹ್ನ ಸುಮಾರು 3:45ಕ್ಕೆ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್‌ನ ಮಾಲೀಕ ಡೇವಿಡ್ ಡಿಸೋಜಾ ಅವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ವೇಳೆ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದತ್ತ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬೈಂದೂರಿನ ಒತ್ತಿನಾಣೆ ಬಳಿ ಬಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದಾರೆ.

ಪೊಲೀಸರು ಬೆನ್ನಟ್ಟಿದಾಗ ಆರೋಪಿಗಳ ಪೈಕಿ ಓರ್ವ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಅಲ್ಲದೆ, ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ತಳ್ಳಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಿಂದ ಪಿಸ್ತೂಲನ್ನೂ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಉತ್ತರ ಪ್ರದೇಶ ಮೂಲದ 42 ವರ್ಷದ ರಾಜು ಅಲಿಯಾಸ್ ಫಾಜಿ ಎಂಬಾತನೇ ಡೇವಿಡ್ ಡಿಸೋಜಾ ಅವರನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರತ್ಯೇಕ ಪ್ರಕರಣವೂ ದಾಖಲಾಗಿದೆ.

- Advertisement -

Latest News

error: Content is protected !!