
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗ್ಯಾಸ್ ಸಿಲಿಂಡರ್ ಇಳಿಸುವ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ. ಮನೆಯೊಂದಕ್ಕೆ ಸಿಲಿಂಡರ್ ಪೂರೈಸಲು ಬಂದಿದ್ದ ಡೆಲಿವರಿ ಸಿಬ್ಬಂದಿ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಮುಂಭಾಗದಲ್ಲಿ ಮಹಿಳೆಯೊಬ್ಬರು ಪೂಜೆ ಸಲ್ಲಿಸಿ ಹೊಸ್ತಿಲ ಬಳಿ ಹಣತೆ ದೀಪ ಹಚ್ಚಿಟ್ಟಿದ್ದರು. ಇದೇ ವೇಳೆ ಗ್ಯಾಸ್ ಸಿಲಿಂಡರ್ ತಂದು ಬಾಗಿಲ ಬಳಿ ಇಡುತ್ತಿದ್ದ ಡೆಲಿವರಿ ಸಿಬ್ಬಂದಿ, ಸಿಲಿಂಡರ್‌ನಿಂದ ಸೋರಿಕೆಯಾಗುತ್ತಿದ್ದ ಅನಿಲವನ್ನು ಗಮನಿಸಿಲ್ಲ ಎನ್ನಲಾಗಿದೆ. ಸಿಲಿಂಡರ್ ಕೆಳಗಿಡುತ್ತಿದ್ದಂತೆ ಸೋರಿಕೆಯಾದ ಅನಿಲಕ್ಕೆ ದೀಪದ ಬೆಂಕಿ ತಗುಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಡೆಲಿವರಿ ಸಿಬ್ಬಂದಿ ತಕ್ಷಣ ಹಿಂದಕ್ಕೆ ಸರಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ವಿಷಯ ತಿಳಿದು ಮಲ್ಲೇಶ್ವರಂ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಸಾರ್ವಜನಿಕರಿಗೆ ಗಾಯಗಳಾಗಿಲ್ಲ. ಮನೆ ಮುಂದೆ ದೀಪ ಹಚ್ಚುವ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆ ಹಾಗೂ ನಿರ್ವಹಣೆ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


